ಕೊರಟಗೆರೆ:- ತಾಲ್ಲೂಕಿನ ಸಿ.ಎನ್.ದುರ್ಗಾ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ನಿರ್ಮಿಸಲಾದ “ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿ” ನಾಮಫಲಕವನ್ನು ಶುಕ್ರವಾರ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಗೋಪಾಲ್ ಕೃಷ್ಣ ಅವರು ಅನಾವರಣಗೊಳಿಸಿದರು.
ಗ್ರಾಮಸ್ಥರು ಹಾಗೂ ದಲಿತ ಯುವಕರು ಗೋಪಾಲ್ ಕೃಷ್ಣ ಅವರನ್ನು ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಹಾಗೂ “ಜೈ ಭೀಮ್” ಘೋಷಣೆಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಕಾರ್ಯಕ್ರಮದ ವೇಳೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಗೋಪಾಲ್ ಕೃಷ್ಣ, ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸಮಾನ ಅವಕಾಶ ಮತ್ತು ಗೌರವಯುತ ಬದುಕಿನ ಭದ್ರ ಬುನಾದಿಯಾಗಿದೆ ಎಂದು ಹೇಳಿದರು.
ಇಂದು ನಾವು ಶಿಕ್ಷಣ ಪಡೆಯಲು, ಮತ ಚಲಾಯಿಸಲು, ಉದ್ಯೋಗ ಪಡೆಯಲು ಹಾಗೂ ಸಮಾನತೆಯ ಬದುಕು ನಡೆಸಲು ಸಾಧ್ಯವಾಗಿರುವುದು ಬಾಬಾಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿದೆ. ಯುವಜನತೆ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಶಿಕ್ಷಣ, ಸಂಘಟನೆ ಮತ್ತು ಸಾಮಾಜಿಕ ಜಾಗೃತಿಯ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಅಂಬೇಡ್ಕರ್ ಅವರ ಚಿಂತನೆಗಳು ಇಡೀ ದೇಶದ ಪ್ರಗತಿಗೆ ಮಾರ್ಗದರ್ಶಿಯಾಗಿವೆ ಎಂದು ತಿಳಿಸಿದರು.
ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೇ ಜ್ಞಾನಾರ್ಜನೆ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ಸಮಾಜಸೇವೆ ಹಾಗೂ ಸಂವಿಧಾನದ ಅರಿವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಸಮಾಜದಲ್ಲಿ ಇನ್ನೂ ಕಂಡುಬರುವ ಅಸಮಾನತೆ ಮತ್ತು ಅನ್ಯಾಯವನ್ನು ಕಾನೂನುಬದ್ಧವಾಗಿ ಎದುರಿಸಲು ಸಂವಿಧಾನವೇ ಶಕ್ತಿಯಾಗಿದೆ ಎಂದು ಹೇಳಿದರು.
ಗ್ರಾಮದ ಮುಖಂಡರು ಮಾತನಾಡಿ, ಅಂಬೇಡ್ಕರ್ ಅವರ ಹೆಸರಿನಲ್ಲಿ ಕಾಲೋನಿಗೆ ನಾಮಕರಣ ಮಾಡಿರುವುದು ಗ್ರಾಮಸ್ಥರಿಗೆ ಹೆಮ್ಮೆಯ ವಿಷಯವಾಗಿದ್ದು, ಇದು ಮುಂದಿನ ಪೀಳಿಗೆಗೆ ಅವರ ತತ್ವ-ಆದರ್ಶಗಳನ್ನು ಪರಿಚಯಿಸುವ ಶಾಶ್ವತ ಸಂಕೇತವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಹಿಳೆಯರು, ಹಿರಿಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ “ಜೈ ಭೀಮ್” ಘೋಷಣೆಗಳನ್ನು ಕೂಗಿದರು. ಈ ಕಾರ್ಯಕ್ರಮವು ಕೇವಲ ನಾಮಫಲಕ ಅನಾವರಣಕ್ಕೆ ಸೀಮಿತವಾಗದೆ, ಸಮಾನತೆ, ಶಿಕ್ಷಣ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಮೌಲ್ಯಗಳನ್ನು ಜನಮನಗಳಿಗೆ ತಲುಪಿಸಿದ ಅರ್ಥಪೂರ್ಣ ಸಮಾರಂಭವಾಗಿ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಲ್ಲೇಶ್, ಮಂಜುನಾಥ್, ಹರ್ಷ, ಸಾಗರ್, ರಮೇಶ್, ಶ್ರೀಧರ್, ತಿಪ್ಪೇಶ್ ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
