ಹಾಸನ: ತೀವ್ರಗೊಳ್ಳುತ್ತಿರುವ ಉಷ್ಣತೆಯ ನಡುವೆ ಜಿಲ್ಲೆಯ ಹಸಿರೀಕರಣ ಅಭಿಯಾನಕ್ಕೆ ಅಗತ್ಯವಾದ ಸಸಿಗಳೇ ಅರಣ್ಯ ಇಲಾಖೆಯ ಬಳಿ ಲಭ್ಯವಿಲ್ಲದಿರುವುದು ಆತಂಕಕಾರಿ ಬೆಳವಣಿಗೆ ಎಂದು ಆರ್.ಪಿ. ವೆಂಕಟೇಶಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿಯೇ ಬಹುತೇಕ ನಗರಗಳು ಅತ್ಯಂತ ಬಿಸಿಯಾದ ಪ್ರದೇಶಗಳಾಗಿ ಪರಿಣಮಿಸುತ್ತಿರುವುದನ್ನು ಪರಿಸರ ತಜ್ಞರು ಎಚ್ಚರಿಸಿದ್ದಾರೆ ಎಂದು ಹೇಳಿದರು. ಅರಣ್ಯ ನಾಶ, ಜಲಮೂಲಗಳ ಹಾಳು, ವಾಹನಗಳ ಹೆಚ್ಚಳ, ಕೈಗಾರಿಕಾ ಮಾಲಿನ್ಯ ಹಾಗೂ ಅತಿಯಾದ ನಗರೀಕರಣವೇ ಉಷ್ಣತೆ ಏರಿಕೆಗೆ ಪ್ರಮುಖ ಕಾರಣಗಳೆಂದು ಅವರು ವಿವರಿಸಿದರು.
ಜಿಲ್ಲಾಡಳಿತ ಐದು ಲಕ್ಷ ಗಿಡಗಳನ್ನು ನೆಟ್ಟು ಹಸಿರೀಕರಣ ಅಭಿಯಾನ ಆರಂಭಿಸಿರುವುದನ್ನು ಸ್ವಾಗತಿಸಿದ ಅವರು, ಅದಕ್ಕೆ ಅಗತ್ಯವಾದ ಸಸಿಗಳ ಕೊರತೆ ಇರುವುದು ಯೋಜನೆಯ ಅನುಷ್ಠಾನಕ್ಕೆ ದೊಡ್ಡ ಅಡ್ಡಿಯಾಗಲಿದೆ ಎಂದು ಹೇಳಿದರು.
ಅರಣ್ಯ ಇಲಾಖೆಗೆ ಅಗತ್ಯ ಅನುದಾನ ಕೊರತೆ ಹಾಗೂ ಸಸಿಗಳ ಉತ್ಪಾದನೆ ಕಡಿಮೆಯಾಗಿರುವುದು ಸಮಸ್ಯೆಗೆ ಕಾರಣವಾಗಿದ್ದು, ಸಾಮಾಜಿಕ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿನ ನಿರ್ಲಕ್ಷ್ಯವೂ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದರು.
ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತಕ್ಷಣ ಮಧ್ಯಪ್ರವೇಶಿಸಿ ಬೇರೆ ರಾಜ್ಯಗಳಿಂದ ಸಸಿಗಳನ್ನು ತರಿಸುವುದು ಸೇರಿದಂತೆ ಸಮಗ್ರ ಹಸಿರೀಕರಣ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಕೊನೆಗೆ, ಸಾರ್ವಜನಿಕರು ಹಸಿರೀಕರಣ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಬೇಕು ಎಂದು ಮನವಿ ಮಾಡಿದರು.
