ರಾಮನಾಥಪುರ: ಕಾವೇರಿ ನದಿ ಈ ಭಾಗದ ಜೀವನಾಡಿಯಾಗಿದ್ದು, ಮುಂದಿನ ಪೀಳಿಗೆಗೂ ಅದರ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನು ಉಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನದಿಯಲ್ಲಿ ಸ್ನಾನ ಮತ್ತು ಪೂಜೆಗಾಗಿ ಆಗಮಿಸುವ ಭಕ್ತರು ಯಾವುದೇ ತ್ಯಾಜ್ಯಗಳನ್ನು ನದಿಗೆ ಹಾಕದೆ ಸ್ವಚ್ಛತೆ ಕಾಪಾಡಬೇಕು ಎಂದು ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ಮನವಿ ಮಾಡಿದರು.
ರಾಮನಾಥಪುರದ ಕಾವೇರಿ ನದಿಯ ವಹ್ನಿ ಪುಷ್ಕರಣಿಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ಆಯೋಜಿಸಿದ್ದ ಜೀವನದಿ ಕಾವೇರಿ ತಾಯಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಮತ್ತು ಸಾಧುಸಂತರ ದಿವ್ಯ ಸಾನಿಧ್ಯದಲ್ಲಿ ಜೀವನದಿ ಕಾವೇರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಲಾಯಿತು.
ಶಾಸಕ ಎ. ಮಂಜು ಮಾತನಾಡಿ, ಕಾವೇರಿ ನದಿಯ ಪಾವಿತ್ರ್ಯವನ್ನು ಕಾಪಾಡುವುದು, ಸ್ವಚ್ಛತೆಯನ್ನು ಸಂರಕ್ಷಿಸುವುದು ಹಾಗೂ ನದಿಯ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ಅತ್ಯಂತ ಮಹತ್ವದ್ದಾಗಿದೆ. ಕಾವೇರಿ ನಮ್ಮ ನಾಡಿನ ಜೀವನಾಡಿಯಾಗಿದ್ದು, ಅದರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಕುಶಾಲನಗರದ ಚಂದ್ರಮೋಹನ್, ಹಾಸನ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಉಪಾಧ್ಯಕ್ಷ ಆರ್.ಕೆ. ಶ್ರೀನಿವಾಸ್, ಖಜಾಂಚಿ ರಘು, ಸಂಘಟನಾ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ತಾಲೂಕು ಅಧ್ಯಕ್ಷ ಸಿದ್ದರಾಜು, ಹಾಸನ ಜಿಲ್ಲಾ ಮಹಾಸಭಾ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಸೇರಿದಂತೆ ಸಮಿತಿಯ ಸದಸ್ಯರು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
