ಬೀದರ್: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ನೆಲ-ಜಲದ ಉಳಿವಿಗಾಗಿ ಹೋರಾಟ ನಡೆಸಿ, ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಸಂಘಟಕರು ಹಾಗೂ ಹೋರಾಟಗಾರರನ್ನು ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಗುರುತಿಸಿ ಪ್ರಶಸ್ತಿ, ಗೌರವ ನೀಡುವ ಕೆಲಸ ಮಾಡಬೇಕು ಎಂದು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಉಪನ್ಯಾಸಕ, ಚಿಂತಕ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಅಭಿಪ್ರಾಯಪಟ್ಟರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗವು ಬೀದರ್ನ ಕರ್ನಾಟಕ ಪದವಿ ಕಾಲೇಜಿನಲ್ಲಿ ವಿದ್ವಾಂಸ ಡಾ. ನಾ. ಗೀತಾಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 23ನೇ ಹಸ್ತಪ್ರತಿ ಸಮ್ಮೇಳನದ ಗೋಷ್ಠಿಯಲ್ಲಿ ‘ಗೀತಾಚಾರ್ಯ ಅವರ ಕನ್ನಡಪರ ಸಂಘಟನೆ ಮತ್ತು ಹೋರಾಟ’ ವಿಷಯ ಕುರಿತು ಅವರು ಮಾತನಾಡಿದರು.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಘಟನೆ, ನೆಲ ಮತ್ತು ಜಲದ ವಿಚಾರವಾಗಿ ಹೋರಾಟ ನಡೆಸಿದ ಅನೇಕರು ತಮ್ಮ ಮನೆ, ಮಠ, ಸಂಸಾರ ಸೇರಿದಂತೆ ತನು, ಮನ, ಧನವನ್ನು ತ್ಯಾಗ ಮಾಡಿ ಬದುಕನ್ನೇ ಕನ್ನಡಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಇಂತಹವರ ಸೇವೆಯನ್ನು ಗುರುತಿಸಿ ಗೌರವಿಸುವ ಜವಾಬ್ದಾರಿ ಸಮಾಜ ಮತ್ತು ಸರ್ಕಾರದ ಮೇಲಿದೆ ಎಂದು ತಿಳಿಸಿದರು.
ಬಿ.ಎಂ.ಶ್ರೀ. ಪ್ರತಿಷ್ಠಾನದ ಕಾರ್ಯಕರ್ತರಾಗಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಡಾ. ನಾ. ಗೀತಾಚಾರ್ಯ ಅವರು ಹಸ್ತಪ್ರತಿ ಶಾಸ್ತ್ರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರು ರಚಿಸಿರುವ ‘ಹಸ್ತಪ್ರತಿಶಾಸ್ತ್ರ ವಿವೇಚನೆ’, ‘ಹಸ್ತಪ್ರತಿ ಅಧ್ಯಯನ ಶಾಸ್ತ್ರ’ ಹಾಗೂ ‘ಕನ್ನಡ ಶಾಸ್ತ್ರೀಯ ಅಧ್ಯಯನ’ ಕೃತಿಗಳು ಈ ಕ್ಷೇತ್ರದ ಪ್ರಮುಖ ಆಕರ ಗ್ರಂಥಗಳಾಗಿವೆ ಎಂದು ಡಾ. ರಾಮಲಿಂಗೇಶ್ವರ ಹೇಳಿದರು.

ಸಮ್ಮೇಳನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ. ವೀರೇಶ್ ಬಡಿಗೇರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ. ನಾ. ಗೀತಾಚಾರ್ಯ ಮಾತನಾಡಿ, ರಾಜ್ಯೋತ್ಸವದ ಹೊಸ್ತಿಲಲ್ಲಿರುವ ನಾವೆಲ್ಲ ಕನ್ನಡಿಗರು ನಮ್ಮ ಮಾತೃಭಾಷೆಯಲ್ಲಿ ಸಹಿ ಮಾಡುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಕರಾಶಿ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮಹಾನಂದ ಮಡಕಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಗಾಯಕ ರಾಜಶೇಖರ್ ಅವರ ಗಾಯನ ಸಭಿಕರಿಗೆ ಮುದ ನೀಡಿತು.

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಶಿಕ್ಷಣ ಪದವಿ ಕಾಲೇಜಿನ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ 23ನೇ ಹಸ್ತಪ್ರತಿ ಸಮ್ಮೇಳನ ಸಂಪನ್ನಗೊಂಡಿತು.
