ಬೆಂಗಳೂರು, ಅ. 28: ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕ ಚರ್ಚೆಗಳನ್ನು ಉತ್ತೇಜಿಸಿ, ವಿಜ್ಞಾನ, ಕಲೆ ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ‘ಮನೋತ್ಸವ’ದ ಮೂರನೇ ಆವೃತ್ತಿಯನ್ನು ಡಿಸೆಂಬರ್ 5 ಮತ್ತು 6ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ರೋಹಿಣಿ ನಿಕೇಲನಿ ಫಿಲಾಂತ್ರಪೀಸ್, ನಿಮ್ಹಾನ್ಸ್ (NIMHANS) ಮತ್ತು ಎನ್ಸಿಬಿಎಸ್ (NCBS) ಸಹಯೋಗದಲ್ಲಿ ಜಯಮಹಲ್ ಪ್ಯಾಲೆಸ್ ಹೋಟೆಲ್ನಲ್ಲಿ ಈ ಎರಡು ದಿನಗಳ ಉತ್ಸವ ನಡೆಯಲಿದೆ.
ಮಾನಸಿಕ ಆರೋಗ್ಯದ ಕುರಿತು ಸರಳವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವ ಚರ್ಚೆಗಳು, ಅಗತ್ಯ ಮಾಹಿತಿ ಹಾಗೂ ಬೆಂಬಲವನ್ನು ಜನರಿಗೆ ತಲುಪಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ತಜ್ಞರ ಸಂವಾದ, ಚಲನಚಿತ್ರ ಪ್ರದರ್ಶನ, ಕಾರ್ಯಾಗಾರಗಳು ಮತ್ತು ಕಲಾ ಪ್ರದರ್ಶನಗಳು ನಡೆಯಲಿವೆ. ಕನ್ನಡದಲ್ಲಿಯೂ ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಮಕ್ಕಳಿಗಾಗಿ ಪ್ರತ್ಯೇಕ ವಲಯವನ್ನು ರೂಪಿಸಲಾಗಿದೆ.
ನಗು, ಮಾನವ ಸಂಬಂಧಗಳು, ಇಂದಿನ ತಂತ್ರಜ್ಞಾನದ ಪ್ರಭಾವ, ನಿದ್ರೆ ಮತ್ತು ಮಾನಸಿಕ ಚೇತರಿಕೆ ಸೇರಿದಂತೆ ದೈನಂದಿನ ಬದುಕಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.
ನಟ ಅನಿಲ್ ಕಪೂರ್, ನರವಿಜ್ಞಾನಿ ಡಾ. ಸೋಫಿ ಸ್ಕಾಟ್, ಹಾಸ್ಯನಟರಾದ ಪ್ರಶಸ್ತಿ ಸಿಂಗ್ ಮತ್ತು ಸೋನು ವೇಣುಗೋಪಾಲ್, ಡಾ. ಶ್ಯಾಮ್ ಭಟ್, ಡಾ. ದೇವಿ ಪ್ರಸಾದ್ ಶೆಟ್ಟಿ, ಪರೋಮಿತಾ ವೋಹ್ರಾ, ಡಾ. ಪ್ರಭಾ ಚಂದ್ರ ಹಾಗೂ ರೋಹಿಣಿ ನಿಕೇಲನಿ ಸೇರಿದಂತೆ ಹಲವು ಗಣ್ಯರು ಉತ್ಸವದ ಪ್ರಮುಖ ವಕ್ತಾರರಾಗಿ ಭಾಗವಹಿಸಲಿದ್ದಾರೆ.
ಸಮುದಾಯದ ಸಹಭಾಗಿತ್ವಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು, ಈ ಉತ್ಸವದ ಪೂರ್ವಭಾವಿಯಾಗಿ ಬೆಂಗಳೂರು ಮತ್ತು ದೆಹಲಿಯಲ್ಲಿ ಮಾನವ ಸಂಬಂಧಗಳು, ವೃದ್ಧಾಪ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು 20ಕ್ಕೂ ಹೆಚ್ಚು ‘ಶೇರಿಂಗ್ ಸರ್ಕಲ್ಸ್’ಗಳನ್ನು ಆಯೋಜಿಸಲಾಗಿದೆ. ಈ ಸಂವಾದಗಳಲ್ಲಿ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.
ಇದರೊಂದಿಗೆ, ಜನರ ದೃಷ್ಟಿಕೋನಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ‘ಫ್ರೇಮ್ಸ್ ಆಫ್ ಫ್ಯಾಮಿಲಿಯಾರಿಟಿ’ ಎಂಬ ಛಾಯಾಗ್ರಹಣ ಸ್ಪರ್ಧೆಯನ್ನೂ ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಅಕ್ಟೋಬರ್ 31, 2026 ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳು, ವೃತ್ತಿಪರರು, ಆರೈಕೆದಾರರು ಹಾಗೂ ಮಾನಸಿಕ ಸ್ವಾಸ್ಥ್ಯದ ಕುರಿತು ಆಸಕ್ತಿ ಹೊಂದಿರುವ ಎಲ್ಲರಿಗೂ ಈ ಉತ್ಸವ ಮುಕ್ತವಾಗಿದ್ದು, ಪ್ರವೇಶ ಉಚಿತವಾಗಿದೆ.
ಉತ್ಸವದ ಕುರಿತು ಹೆಚ್ಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
