ಮಂಗೋಲಿಯ ಸಾಂಪ್ರದಾಯಕ ಉತ್ಸವ ನೋಡಲು ಚೀನಾ ಮತ್ತು ಕೋರಿಯ ದೇಶಗಳಿಂದ ಬಂದ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇವರ ಕಣಿವೆಯ ವಾಸ ಸ್ಥಳದಿಂದ ನಮ್ಮನ್ನು ಸ್ವಾಗತಿಸಲು ಒಂಟೆ, ಯಾಕ್ ಮತ್ತು ಕುದುರೆಯ ಮೂಲಕ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಅವರ ಭಾಷೆಯಲ್ಲಿ ಸ್ವಾಗತ ಕೋರುತ್ತಾ ಕೈ ಬೀಸುತ್ತಾ ನಮ್ಮಹತ್ತಿರ ಬಂದರು. ಹತ್ತಿರ ಬಂದಾಕ್ಷಣ ಎಲ್ಲರೂ ಅವರ ಮುಂದೆ ನಿಂತು ಫೋಟೊ ತೆಗೆಸಿಕೊಂಡರು. ಇವರ ಜೊತೆಯೇ ಆವರ ಹಳ್ಳಿಗೆ ನಡೆದುಕೊಂಡು ಹೋದೆವು. ಇಲ್ಲಿ ಕುದುರೆ, ಒಂಟೆ, ಯಾಕ್ ಮತ್ತು ಗಾಡಿಗಳ ಮೂಲಕ ತಮ್ಮ ಸಾಮಾನು ಸರಂಜಾಮುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೇಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುದರ ಶೋ ಇತ್ತು. ಅವರ ಜಾನಪದ ಶೈಲಿಯ ಹಾಡುಗಳನ್ನು ತಮ್ಮ ಪಾರಂಪರಿಕ ವಾದ್ಯಗಳಿಂದ ಹಾಡಿದರು. ಕೇಳಲು ಇಂಪಾಗಿ ಇತ್ತು ಮತ್ತು ಕುದುರೆ ಹಾಡು ಖುಷಿ ತಂದಿತ್ತು. ಇವರ ಭಾಷೆಯಲ್ಲಿ “ಚುಸ್ಸಸ್ಸಸ್ಸ” ಎಂದರೆ ಕುದುರೆಯು ಮುಂದೆ ಹೋಗುತ್ತೆ. ಓಡುತ್ತಿರುವ ಕುದುರೆಯನ್ನು ನಿಲ್ಲಿಸಲು “ಡಿರ್ರರ್ರರ್ರ” ಎನ್ನ ಬೇಕು.

ಇಲ್ಲಿಯ ಸಾಂಪ್ರದಾಯಕ ಆಟಗಳಲ್ಲಿ ಮೂರು ಆಟಗಳು ಪ್ರಮುಖವಾದದ್ದು. ಈ ಆಟಗಳನ್ನು “Three Manly Games” ಎಂದು ಕರೆಯುತ್ತಾರೆ. ಈ ಆಟಗಳು ರಾಷ್ಟ್ರೀಯ ಆಟಗಳಾಗಿದ್ದು ಬೇಸಿಗೆಯ ಜುಲೈ ತಿಂಗಳ ಮೊದಲ ಎರಡು ವಾರಗಳಲ್ಲಿ ಎಲ್ಲಾ ಸಮುದಾಯದವರು ಆಚರಣೆ ಮಾಡುತ್ತಾರೆ. ಸ್ಪರ್ಧೆಗಳು ನೆಡೆದು ಗೆದ್ದ ಸ್ಪರ್ಧಾಳುಗಳಿಗೆ ಬಹುಮಾನ ನೀಡುತ್ತಾರೆ. ಜಪಾನಿನ ಸೂಮೊ ತರಹದ ಕುಸ್ತಿಗೆ “ಬೂಕ್”, ಮೇಕೆ ತಲೆಯೊಂದಿಗೆ ಆಡುವ ಕುದುರೆಗಳ ಪಂದ್ಯಾವಳಿಯನ್ನು “ಕೋಕ್ ಬೋರು ಅಥವ ಉಲಕ್ ತಾರ್ಥಿಶ್” ಮತ್ತು ಬಿಲ್ಲು ಬಾಣದ ಸ್ಪರ್ಧೆಗೆ “ಬುರ್ಯತ್ ಅಥವ ಕಲ್ಕ್” ಎಂದು ಕರೆಯುತ್ತಾರೆ.

ಪ್ರವಾಸಿಗರನ್ನು ಅವರ ಯುರ್ಟ ಒಳಗೆ ಬರಮಾಡಿಕೊಂಡು, ಕೂರಿಸಿ ತಮ್ಮ ಆಥಿತ್ಯವನ್ನು ನೀಡುತ್ತಾರೆ. ಮೊದಲು ಹಾಲು, ಮತ್ತೆ ಚೀಸ್ ಹಾಗು ಕೊನೆಗೆ ಅವರು ತಯಾರಿಸಿದ ಸಿಹಿ ಕೊಡುತ್ತಾರೆ. ಇಲ್ಲಿಯ ವಿಶೇಷ, ಆ ಯುರ್ಟಿನ ಮುಖ್ಯಸ್ಥ ಬಂದ ಅತಿಥಿಗಳಿಗೆ ತನ್ನ ಧನಾತ್ಮಕ ಪಚ್ಚೆ, ನೀಲಿಮಣಿ ಅಥವ ಹವಳದಿಂದ ಮಾಡಿದ ಸೀಸೆಯಲ್ಲಿ ಭಾರತದಿಂದ ತರಿಸಿದ ಬೆಲೆಬಾಳುವ ಹೊಗೆ ಸೊಪ್ಪನ್ನು ನೀಡಿ ವಾಸನೆ ನೋಡಲು ಹೇಳುತ್ತಾರೆ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ನಾವು ಸಗಣಿ ಬೆರಣಿಯನ್ನು ಅಡಿಗೆ ಮನೆಯ ಒಲೆಗೆ ಅಥವ ಸ್ನಾನದ ಮನೆ ಒಲೆಗೆ ಉಪಯೋಗಿಸುವುದು ವಾಡಿಕೆ.

ಈ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕುದುರೆ, ಯಾಕ್ ಮತ್ತು ಒಂಟೆ ಸಗಣಿ ಬೆರಣಿಗಳನ್ನು ಯುರ್ಟ ಒಳಗೆ ಉಪಯೋಗಿಸುತ್ತಾರೆ. ಇಲ್ಲಿನ ಮುಖ್ಯಸ್ಥರ ಪ್ರಕಾರ ಹುಲ್ಲು ಗಾವಿಲಿನ ಕೆಲವು ಔಷದಿ ಗುಣವುಳ್ಳ ಗಿಡಗಳನ್ನು ಜಾನುವಾರಗಳು ತಿನ್ನುವುದರಿಂದ ಟೆಂಟಿನ ಒಳಗಿನ ಇದರ ಹೊಗೆ ವೈರಾಣುಗಳನ್ನು ಸಾಯಿಸುತ್ತವೆ ಎಂಬುದು. ಇವೆಲ್ಲಾ ಆದ ಮೇಲೆ ಕಜಕ್ ಟೆಂಟಿನ ಒಳಗೆ ಅಲ್ಲಿಯ ಮುಖ್ಯಸ್ಥ ಗಿಡುಗ (falcon) ಒಂದನ್ನು ತನ್ನ ಮುಂದೋಳಿನ ಮೇಲೆ ಕೂರಿಸಿಕೊಂಡಿರುತ್ತಾರೆ. ಪ್ರವಾಸಿಗರು ಕಜಕ್ ಸಾಂಪ್ರದಾಯಿಕ ಉಡುಗೆ ತೊಟ್ಟು ಇವರ ಪಕ್ಕ ಕೂತು ಫೋಟೋ ತೆಗೆಸಿಕೊಳ್ಳುತ್ತಾರೆ.

ಇಲ್ಲಿಂದ ನಾವು ರಾಜಧಾನಿಯಾದ ಉಲಾನ್ ಬಾತಾರ್ ತಲುಪಿದೆವು. ಈ ದೇಶ ನಮ್ಮ ದೇಶದಂತಯೇ ಪ್ರಜಾಪ್ರಭುತ್ವ ದೇಶ. ಇಲ್ಲಿಯ ಇಂದಿನ ಅಧ್ಯಕ್ಷ “ಊಗಾಇನ್ ಗುರೇಸುಕ್ (Ukhnaagiin khulesukh). ಇಲ್ಲಿಯ ಸಂಸತ್ ಭವನದ ಚೌಕ ಸುಪ್ರಸಿದ್ಧ ಪ್ರವಾಸಿ ತಾಣ. ಸಂಸತ್ ಮುಂಭಾಗ ಚಿಂಗಿಸ್ ಹಾನ್ ಪ್ರತಿಮೆ ಇದೆ. ಚಿಂಗಿಸ್ ಹಾನ್ ಕುರಿತಂತೆ ವಿಶೇಷವಾದ ವಸ್ತು ಸಂಗ್ರಹಾಲಯ ಇದೆ ಮತ್ತು ರಾಷ್ಟ್ರೀಯ ಸಂಗ್ರಹಾಲಯವೂ ಇದೆ. ಈ ನಗರ ಬಹು ಬೇಗ ಬೆಳೆಯುತ್ತಿದೆ. ಎಲ್ಲಿ ನೋಡಿದರೆ ಅಲ್ಲಿ ಬಹು ಮಹಡಿಯ ಕಟ್ಟಡಗಳು ಏಳುತ್ತಿವೆ. ಈ ದೇಶವು ಕಾಮನ್ ವೆಲ್ತ ಕಂಟ್ರಿ ಅಲ್ಲ. ಬಲಗೈ ಡ್ರೈವ್ ವಾಹನಗಳನ್ನು ಬಹಳವಾಗಿ ಕಾಣಲು ಸಿಗುತ್ತವೆ. ಆದರೆ ಡ್ರೈವ್ ಮಾಡುವ ರಸ್ತೆಯ ಪಥ ಬಲಗಡೆಯದ್ದು. ಒಂದು ತರಹ ಉಲ್ಟ. ವಾಹನಗಳ ನಂಬರ್ ಪ್ಲೇಟ್ ಸಹ ಉಲ್ಟಾ ಬರಹ.

ಮೊದಲು ನಂಬರ್, ಇದಾದ ನಂತರ ಅರ್ ಟಿ ಒ ಕೋಡ್, ಆಮೇಲೆ ಪ್ರಾಂತ್ಯದ ಕೊಡ್. ನನಗೆ ಇವುಗಳನ್ನು ಕಂಡು ಸ್ವಲ್ಪ ವಿಚಿತ್ರ ಎನ್ನಿಸಿತ್ತು. ಇಲ್ಲಿ ಪ್ರೀತಿಸಿ ಮದುವೆಯಾಗುವುದು ಹೆಚ್ಚು. ವಿಚ್ಛೇದನೆಯು ಭಾರತದಂತಯೇ. ನ್ಯಾಯಾಂಗ ಮೂರು ಹಂತದಲ್ಲಿ ಭಾರತದಂತೆಯೆ ಕೆಲಸ ಮಾಡುತ್ತದೆ. ವಿಧ್ಯಾಭ್ಯಾಸ ಮತ್ತು ಆರೋಗ್ಯ ಸಹ ನಮಲ್ಲಿಯಂತೆ ಇದೆ. ನಗರವನ್ನು ಸ್ವಚ್ಛವಾಗಿ ಇಟ್ಟಿದ್ದಾರೆ. ಯಾರು ಸಹ ಸಂಚಾರ ಉಲ್ಲಂಘನೆ ಮಾಡುವುದಿಲ್ಲ. ಇಲ್ಲಿಯ ಅಪರಾಧ ಸೂಚ್ಯಂಕ ನಮ್ಮ ಭಾರತಕ್ಕಿಂತ ಕಡಿಮೆ. ಹತ್ಯೆ ಮತ್ತು ಮಹಿಳೆಯರ ಅತ್ಯಾಚಾರ ಅತಿ ವಿರಳ.
ಈಗ ಈ ದೇಶದ ಅಭಿವೃದ್ಧಿಯ ವೇಗ ನೋಡಿದರೆ ಎಲ್ಲಿ ಇವರ ಆರೋಗ್ಯಕರ ಹಸಿರು ಹುಲ್ಲು ಗಾವಲು ಮತ್ತು ಸ್ವಚ್ಛ ವಾತಾವರಣ ಹಾಳು ಮಾಡುತ್ತಾರೊ ತಿಳಿಯದು. ನಮ್ಮ ಒಂದು ರೂಪಾಯಿಗೆ ಅಲ್ಲಿಯ ಹಣ ನಲವತ್ತು ತುಗ್ರಿಕ್. ಐದು ವರ್ಷದಿಂದ ಈಚೆಗೆ ಈ ದೇಶ ಆರ್ಥಿಕವಾಗಿ ಸದೃಢವಾಗುತ್ತಿದೆ, ಆದರೆ ಈ ದೇಶ ರಷ್ಯ, ಕಜಕಸ್ಥಾನ್ ಮತ್ತು ಚೀನಾ ಸುತ್ತು (land lock) ವರಿದಿರುವದರಿಂದ ಇದರ ಆರ್ಥಿಕತೆ ಆ ದೇಶಗಳ ಕೃಪೆಯಲ್ಲಿ ಇದೆ.

ಮಂಗೋಲಿಯ ದೇಶದ ರಾಷ್ಟ್ರೀಯ ಚಿಹ್ನೆಯಾದ “ಸಯುಂಬೂ” ಸಂಸ್ಕೃತ ಪದ “ಸ್ವಯಂಬೋ” ಇಂದ ಬಂದಿದೆ ಎಂದು ನಮ್ಮ ಗೈಡ್ ತಿಳಿಸಿದರು. ಈ ಪದದ ಅಲ್ಲಿಯ ಅರ್ಥ “ಸಮಗ್ರತೆ ಮತ್ತು ಸ್ವಾತಂತ್ರ್ಯ (intigrity and liberty). ಇದೆ ಪದವನ್ನು ಭಾರತೀಯರು ಈಶ್ವರನೆಂದು ಸಂಭೋಧಿಸುತ್ತಾರೆ.
ನಿಜವಾದ ಅರ್ಥ “ಸ್ವಯಂ ಅಸ್ತಿತ್ವ ( self manifestation or self existent). ತಂತ್ರ ವಿಜ್ಞಾನದಲ್ಲಿ ಈಶ್ವರ ಎಂದರೆ “ಅರಿವು ಅಥವ ಹರಿವು (consciousness)”. ಒಮ್ಮೆ ಯೋಚಿಸಿದರೆ ನಮ್ಮ ಹಿಂದು ತತ್ವ ಎಲ್ಲಿಯವರೆಗೆ ಹಬ್ಬಿದೆ ಅಲ್ಲವೇ. ಈ ಚಿಹ್ನೆಯಲ್ಲಿ ನಮ್ಮ ಹಾಗೆಯೇ ಪಂಚ ಭೂತ (fire, water, space, earth and ether) ಗಳನ್ನು ಒಳಗೊಂಡು ಮಧ್ಯ ಭಾಗದಲ್ಲಿ “ಯಾಂಗ್ ಮತ್ತು ಯಿನ್ (tao sign for male and female)” ಇದೆ. ಇವುಗಳ ನಾಲ್ಕು ಕಡೆ ಗೀಟು (lines) ಗಳು “ಮೀನಿನ” ಪ್ರತೀಕ ಎಂದು ಹೇಳುತ್ತಾರೆ. ಮೀನುಗಳು ನಿದ್ದೆ ಮಾಡದೆ ಅವರ ಸಮುದಾಯವನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತದೆ ಎನ್ನುವುದು ಮಂಗೋಲಿಯ ಪ್ರಜೆಗಳ ನಂಬಿಕೆ. ಈ ಚಿಹ್ನೆಯನ್ನು ಟಿಬೆಟಿಯನ್ ಬೌದ್ಧ ಬಿಕು “ಝಾನಾಬಜಾರ್” ಹದಿನಾರನೆಯ ಶತಮಾನದಲ್ಲಿ ವಿನ್ಯಾಸ ಮಾಡಿದ ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಇವರ ಭಾವುಟದ ಕೆಂಪು “ಸ್ವಾತಂತ್ರ್ಯ” ಮತ್ತು ನೀಲಿ “ಶಾಂತಿಯ” ಸಂಕೇತಗಳು.
ಒಟ್ಟಾರೆ ಮಂಗೋಲಿಯ ದೇಶಕ್ಕೆ ಭೇಟಿ ನೀಡಿ ಹಸಿರಿನಿಂದ ನಮ್ಮ ಕಣ್ಣುಗಳಿಗೆ ಹಬ್ಬದ ವಾತಾವರಣದ ಅನುಭವ ಮತ್ತು ಶರೀರಕ್ಕೆ ಸ್ವಚ್ಛವಾದ ಗಾಳಿ ಸೇವನೆ. ಬರುವಾಗ ಬೀಜಿಂಗ್ ಮೂಲಕ ಸಿಂಗಾಪುರ ತಲುಪಿ ಬೆಂಗಳೂರಿನ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದು ಸೇರಿದೆವು.
ಮುಗಿಯಿತು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

ಆಧುನಿಕ ಯುದ್ಧ, ಹಿಂದಿನ ಯುದ್ಧಗಳು, ಮಂಗೋಲಿಯ, ಚಂಗಿಸ್ ಖಾನ್ ಮತ್ತು ಕುದುರೆ..ಮಂಗೋಲಿಯ – ಪ್ರವಾಸ ಕಥನ – ಭಾಗ 1
ಮಂಗೋಲಿಯ ಮೇಲ್ಮೈಯ ಲಕ್ಷಣ ಮತ್ತು ಚಂಗೀಸ್ ಖಾನ್ (ಜೆಂಗಿಸ್ ಖಾನ್)- ಮಂಗೋಲಿಯ – ಪ್ರವಾಸ ಕಥನ – ಭಾಗ 2
ವಸ್ತು ಸಂಗ್ರಹಾಲಯ, ಕಲ್ಲಿನ ಆಮೆ, ಅಧ್ಯಾತ್ಮಿಕ ಬೌದ್ಧ ವಿಹಾರ ಮತ್ತು ಪನ್ನೀರು..
ಹುಸ್ತೈ ಉದ್ಯಾನವನ, ಯುರ್ಟ, ಹಸಿರು ಗಾವಲು ಮತ್ತು ತಾಕಿಃ ಕಾಡು ಕುದುರೆ…
ಯುಗೀ ಸರೋವರ, ಕಾರಕೋರಮ್ ನಗರ, ವಸ್ತು ಸಂಗ್ರಹಾಲಯ ಮತ್ತು ಮಂಗೋಲ್ ನೊಮಾಡಿಕ್
