ಅಮ್ಮ…. ಏನೆಂದು ವರ್ಣಿಸಲಿ ಅವಳನ್ನು? ಅಮ್ಮ ಕೇವಲ ಎರಡಕ್ಷರದ ಪದ ಅಷ್ಟೇನಾ? ಅವಳ ಬಗ್ಗೆ ಏನು ಹೇಳಿದರೂ ಕಡಿಮೆಯೇ…
ಸ್ವಾರ್ಥದ ಈ ಪ್ರಪಂಚದಲ್ಲಿ ನಿಸ್ವಾರ್ಥ ಪ್ರೀತಿಯನ್ನು ಕೊಟ್ಟವಳು ಅವಳು. ತನ್ನ ಎಲ್ಲಾ ಆಸೆ-ಕನಸುಗಳನ್ನು ಬದಿಗಿಟ್ಟು ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟವಳು. ಬಿಸಿಲು-ಮಳೆ ಎನ್ನದೆ ತನ್ನವರಿಗಾಗಿ ದುಡಿದವಳು. ಏನೇ ಆದರೂ, ಯಾರು ಏನೇ ಮಾತನಾಡಿದರೂ ಧೈರ್ಯ ಕಳೆದುಕೊಳ್ಳದ ಗಟ್ಟಿಗಿತ್ತಿ.
ಆದರೆ ಆ ಒಂದು ದಿನ…
ಅವಳ ಆಕ್ರಂದನ, ಬತ್ತಿಹೋದ ಕಣ್ಣೀರು, ಅವಳ ಯಾತನೆ… ತನ್ನ ಪ್ರಪಂಚದಲ್ಲೇ ಜೀವಕ್ಕಿಂತ ಹೆಚ್ಚು ಪ್ರೀತಿಸಿದ್ದ ವ್ಯಕ್ತಿಯನ್ನು ಕಳೆದುಕೊಂಡು ಅವಳು ಸಂಪೂರ್ಣವಾಗಿ ಕುಸಿದು ಹೋಗಿದ್ದಳು.
ಒಂದು ಕ್ಷಣ ಅವಳನ್ನು ನೋಡಿದರೆ, “ಇವಳೇನಾ ಆ ಗಟ್ಟಿಗಿತ್ತಿ?” ಅನ್ನಿಸುತ್ತಿತ್ತು. ಅವಳ ನೋವಿಗೆ ನಾನು ಕಾರಣನಾ…? ಗೊತ್ತಿಲ್ಲ, “ನಾನಿದ್ದೀನಿ ನೋಡ್ಕೋತ್ತೀನಿ” ಎಂದು ಹೇಳುತ್ತಿದ್ದ ನನ್ನ ಅಮ್ಮನ ಕಣ್ಣೀರು ಒರೆಸಲು ನಾನೇ ಅಶಕ್ತಳಾಗಿ ಹೋಗಿದ್ದೆ.
ನಮ್ಮ ಮನೆಯ ಆಧಾರಸ್ತಂಭವೇ ಅಂದು ಕುಸಿದಿತ್ತು. ದೇವರು ಯಾಕೆ ಇಷ್ಟು ಕ್ರೂರಿ ಅನ್ನಿಸಿತ್ತು…
“ಮುಂದೆ ಜೀವನ ಹೇಗೆ?” ಎಂಬ ನೂರು ಪ್ರಶ್ನೆಗಳ ನಡುವೆ, ತನ್ನ ಜೀವನದ ದೊಡ್ಡ ಆಸರೆಯನ್ನು ಕಳೆದುಕೊಂಡರೂ ಸೋಲದ ಅವಳು, ಬೆಳಗ್ಗೆ ಸೂರ್ಯ ಹುಟ್ಟುವ ಮೊದಲು ಎದ್ದು ಹಸು-ಕರು, ತೋಟ, ಕೆಲಸ ಎಂದು ಕೆಲಸಕ್ಕೆ ಹೊರಟಳು.
“ಆಗಿದ್ದು ಆಗಿ ಹೋಗಿದೆ… ಮುಂದೆ ಜೀವನ ಸಾಗಬೇಕು. ಯೋಚಿಸುತ್ತಾ ಕುಳಿತರೆ ಆಗುತ್ತಾ?” ಎಂದು ಮಾತಿಲ್ಲದೇ ಧೈರ್ಯ ಕೊಟ್ಟವಳು ಅವಳು.
ಅವಳ ನೋವನ್ನು ತಡೆಯೋ ಶಕ್ತಿ ನನಗಿರಲಿಲ್ಲ. ಆದರೆ ಒಂದು ಮಾತ್ರ ಹೇಳಬಲ್ಲೆ — ಅವಳ ಸಂತೋಷಕ್ಕಾಗಿ ಏನು ಬೇಕಾದರೂ ಮಾಡುವ ಪ್ರಯತ್ನದಲ್ಲೇ ನನ್ನ ದಿನಗಳು ಓಡುತ್ತಿವೆ. ಅವಳನ್ನು ನೆಮ್ಮದಿಯಾಗಿ ನೋಡಿಕೊಳ್ಳೋದೇ ನನ್ನ ದೊಡ್ಡ ಆಸೆ… ಏಕೆಂದರೆ ನನ್ನ ಬದುಕಿಗೂ ಅವಳೇ ಆಸರೆ.
ಈಗಲಾದರೂ ಕಷ್ಟದ ದಿನಗಳು ಕರಗಿ ಸದಾ ನಗುತ್ತಿರಲಿ ಅವಳ ಮನ….
ಈ ಬದುಕಿನಲ್ಲಿ ನೀ ಮಾಡಿದಷ್ಟು ಪ್ರೀತಿ, ತ್ಯಾಗ, ಕೆಲಸ-ಕಾರ್ಯ ಯಾರಿಂದಲೂ ಸಾಧ್ಯವಿಲ್ಲ ಅಮ್ಮ.
ನಿನ್ನ ತ್ಯಾಗಕ್ಕೆ ನನ್ನ ದೊಡ್ಡ ನಮನ. ❤️
ಈ ಅಮ್ಮಂದಿರ ದಿನದಂದು ನನ್ನ ಪ್ರೀತಿಯ ಅಮ್ಮನಿಗೆ
Happy Mother’s Day Amma ❤️🌸
