ನಾರ್ವೆಯ ಓಸ್ಲೋದಲ್ಲಿ ಮೇ 18, 2026ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ Grand Cross of the Royal Norwegian Order of Merit ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಇದು ನಾರ್ವೆಯ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ರಾಯಲ್ ನಾರ್ವೇಜಿಯನ್ ಆರ್ಡರ್ ಆಫ್ ಮೆರಿಟ್ನ ಅತಿ ಉನ್ನತ ಶ್ರೇಣಿಯಾಗಿದೆ.
ಈ ಗೌರವವನ್ನು 1985ರಲ್ಲಿ ನಾರ್ವೆಯ ರಾಜ ಒಲಾವ್ V ಅವರು ಸ್ಥಾಪಿಸಿದ್ದರು. ವಿದೇಶಿ ನಾಗರಿಕರು ಹಾಗೂ ನಾರ್ವೆಯ ನಾಗರಿಕರಿಗೆ ದೇಶದ ಹಿತಾಸಕ್ತಿಗೆ ನೀಡಿದ ವಿಶೇಷ ಸೇವೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.
ಗ್ರ್ಯಾಂಡ್ ಕ್ರಾಸ್ ಈ ಆರ್ಡರ್ನ ಅತ್ಯುನ್ನತ ಹಂತವಾಗಿದ್ದು, ಕಮಾಂಡರ್ ಮತ್ತು ನೈಟ್ ಹುದ್ದೆಗಳಿಗಿಂತ ಮೇಲಿನ ಸ್ಥಾನವನ್ನು ಹೊಂದಿದೆ. ಇದು ಜಾಗತಿಕ ರಾಜತಾಂತ್ರಿಕ ಗೌರವಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
ಭಾರತ ಮತ್ತು ನಾರ್ವೆ 1947ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ್ದು, ಸಮುದ್ರ ವ್ಯವಹಾರ, ಹವಾಮಾನ ಬದಲಾವಣೆ, ಮೀನುಗಾರಿಕೆ ಹಾಗೂ ಅಭಿವೃದ್ಧಿ ಸಹಕಾರ ಕ್ಷೇತ್ರಗಳಲ್ಲಿ ಸಹಯೋಗ ಹೊಂದಿವೆ.
ಈ ಗೌರವದೊಂದಿಗೆ ಪ್ರಧಾನಿ ಮೋದಿ ಅವರಿಗೆ ದೊರೆತ ಅಂತರರಾಷ್ಟ್ರೀಯ ಗೌರವಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.
