ರಾಮನಾಥಪುರ, ಜು.20: ಇದೇ ಜುಲೈ 27ರಂದು ದೇಶಾದ್ಯಂತ **’ಗೋಮಾತೆಯ ಗೌರವದ ದಿನ’**ವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಗೋಸಂರಕ್ಷಕರಿಂದ ಸಹಿ ಸಂಗ್ರಹ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಪಟ್ಟಾಭಿರಾಮ ದೇವಾಲಯದ ಮಾಜಿ ಕನ್ವಿನರ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ ತಿಳಿಸಿದ್ದಾರೆ.
ರಾಮನಾಥಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಗೋವು ನೀಡುವ ಹಾಲನ್ನು ಅಮೃತಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ. ಹೊಸ ಮನೆ ಪ್ರವೇಶ ಸೇರಿದಂತೆ ಅನೇಕ ಶುಭಕಾರ್ಯಗಳಲ್ಲಿ ಗೋವನ್ನು ಮೊದಲು ಮನೆಯೊಳಗೆ ಕರೆತಂದು ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ ಎಂದು ಹೇಳಿದರು.
ಗೋವಿನ ಸಂರಕ್ಷಣೆ ಹಾಗೂ ಸಂತಾನ ಉಳಿವಿನ ಉದ್ದೇಶದಿಂದ ಕರ್ನಾಟಕ ಸೇರಿದಂತೆ ದೇಶಾದ್ಯಂತ ಗೋಸಂರಕ್ಷಕರು ಜುಲೈ 27ರಂದು ಸಹಿ ಸಂಗ್ರಹ ಅಭಿಯಾನವನ್ನು ಮುಂದುವರಿಸಲಿದ್ದಾರೆ. ಸಾಧು-ಸಂತರ ಮಾರ್ಗದರ್ಶನದಲ್ಲಿ ‘ವಂದೇ ಗೋಮಾತರಂ – ಗೋಸಮ್ಮಾನ ಆಹ್ವಾನ’ ಹೆಸರಿನಲ್ಲಿ ನಡೆಯುತ್ತಿರುವ ಈ ಎರಡನೇ ಹಂತದ ಅಭಿಯಾನದಲ್ಲಿ ವಿವಿಧ ಮಠಗಳ ಸಂತರು, ಗೋಭಕ್ತರು, ಗೋಸಂರಕ್ಷಕರು ಹಾಗೂ ಗೋಸೇವಕರು ಭಾಗವಹಿಸಲಿದ್ದಾರೆ.
ಅಂದು ಭಜನೆ-ಸಂಕೀರ್ತನೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಮನವಿಯಲ್ಲಿ ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸಬೇಕು, ದೇಶಾದ್ಯಂತ ಏಕರೂಪದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕು, ಗೋ ಸಚಿವಾಲಯ ಸ್ಥಾಪಿಸಬೇಕು ಹಾಗೂ ಗೋಮಾಳಗಳನ್ನು ಗೋವುಗಳ ಸಂರಕ್ಷಣೆಗೆ ಮೀಸಲಿಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗುತ್ತದೆ ಎಂದು ತಿಳಿಸಿದರು.
ಈ ನಾಲ್ಕು ಹಂತಗಳ ಅಭಿಯಾನದ ಮೊದಲ ಹಂತವಾಗಿ ಕಳೆದ ಏಪ್ರಿಲ್ 27ರಂದು ದೇಶಾದ್ಯಂತ ತಹಸೀಲ್ದಾರರಿಗೆ ಸಹಿ ಸಂಗ್ರಹದೊಂದಿಗೆ ಮನವಿ ಸಲ್ಲಿಸಲಾಗಿದ್ದು, ಅದು ವಿಶ್ವದಾಖಲೆ ನಿರ್ಮಿಸಿದೆ ಎಂದು ಅವರು ಹೇಳಿದರು.
ಅಭಿಯಾನದ ಬಳಿಕ ದೇಶದ ಅನೇಕ ಸಂಘಟನೆಗಳು ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸುವಂತೆ ಹಾಗೂ ಗೋಹತ್ಯೆ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗೋಸಂರಕ್ಷಕ ಆರ್.ಎಸ್. ನರಸಿಂಹಯ್ಯಂಗಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
