ಕೊರಟಗೆರೆ:- ಮಾಜಿ ಪ್ರಧಾನಮಂತ್ರಿ ಹಾಗೂ ಜಾತ್ಯತೀತ ಜನತಾದಳದ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ನಿಧನಕ್ಕೆ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಂತಾಪ ಸಂದೇಶ ಹೊರಡಿಸಿರುವ ಶ್ರೀಗಳು, “ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು ಮಾಜಿ ಪ್ರಧಾನಮಂತ್ರಿಯವರ ಧರ್ಮಪತ್ನಿಯಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ ಅತ್ಯಂತ ಸರಳ, ಸಜ್ಜನಿಕೆ ಮತ್ತು ವಿನಯಶೀಲತೆಯಿಂದ ಜೀವನ ನಡೆಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು. ದೇವೇಗೌಡರವರ ರಾಜಕೀಯ ಜೀವನದಲ್ಲಿ ಅವರು ನಿಜವಾದ ಬೆನ್ನೆಲುಬಾಗಿ, ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಅವರಿಗೆ ನಿರಂತರ ಧೈರ್ಯ ಮತ್ತು ಪ್ರೇರಣೆಯಾಗಿ ನಿಂತಿದ್ದರು” ಎಂದು ಹೇಳಿದ್ದಾರೆ.
“ಚೆನ್ನಮ್ಮ ಅವರು ಮಾತೃ ಹೃದಯದ ಮಮತೆ, ಶಿಸ್ತುಬದ್ಧ ಜೀವನ, ಸೇವಾ ಮನೋಭಾವ ಮತ್ತು ದಾನ-ಧರ್ಮದ ಮೂಲಕ ಸಮಾಜಕ್ಕೆ ಆದರ್ಶವಾಗಿದ್ದರು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಅವರ ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಅಧಿಕಾರ ಮತ್ತು ಸ್ಥಾನಮಾನಕ್ಕಿಂತ ಮಾನವೀಯತೆಗೆ ಹೆಚ್ಚಿನ ಮಹತ್ವ ನೀಡಿದ ಅವರ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ” ಎಂದು ಶ್ರೀಗಳು ತಿಳಿಸಿದ್ದಾರೆ.
“ಅವರ ಅಗಲಿಕೆ ದೇವೇಗೌಡರ ಕುಟುಂಬಕ್ಕೆ ಮಾತ್ರವಲ್ಲ, ರಾಜ್ಯದ ಜನತೆಗೂ ಹಾಗೂ ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶಮಯ ಬದುಕಿನ ನೆನಪು ಸದಾ ಜನಮನದಲ್ಲಿ ಚಿರಸ್ಥಾಯಿಯಾಗಿರುತ್ತದೆ. ಪರಮಾತ್ಮನು ಅಗಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬದ ಸದಸ್ಯರು, ಬಂಧು-ಬಳಗ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ
