ರಾಮನಾಥಪುರ, ಜೂನ್ 21: ಮಾನವ ಕುಲದ ಅಮೂಲ್ಯ ಸಂಪತ್ತಾದ ಯೋಗವು ಆರೋಗ್ಯಕರ ಹಾಗೂ ಸಂತೋಷಕರ ಜೀವನಕ್ಕೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಸಾಹಿತಿ ಹಾಗೂ ಯೋಗ ಶಿಕ್ಷಕರಾದ ಕಾಳಬೋಯಿ ಹೇಳಿದರು.
ಪಟ್ಟಣದ ಪಟ್ಟಾಭಿರಾಮ ಗ್ರಾಮಾಂತರ ಶಾಲೆಯ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.

“ಸಂತೋಷಕರ ವಯೋವೃದ್ಧಿ – ಸಂತೋಷಕರ ಜೀವನ” ಎಂಬ ವಿಶ್ವ ಯೋಗ ದಿನದ ಈ ವರ್ಷದ ಘೋಷವಾಕ್ಯವು ಅತ್ಯಂತ ಅರ್ಥಪೂರ್ಣ ಸಂದೇಶವನ್ನು ಸಾರುತ್ತದೆ. ಹಿರಿಯರು ನಮಗೆ ನೀಡಿರುವ ಯೋಗದ ಪರಂಪರೆ, ತ್ಯಾಗ ಮತ್ತು ಮೌಲ್ಯಗಳು ಪ್ರೀತಿ, ಗೌರವ, ಸಮಯದ ಸದ್ಬಳಕೆ ಹಾಗೂ ಆರೋಗ್ಯಕರ ಜೀವನವನ್ನು ಕಲಿಸುತ್ತವೆ ಎಂದು ತಿಳಿಸಿದರು.

ಯೋಗವು ಹಿರಿಯರ ದೇಹಕ್ಕೆ ಶಕ್ತಿ, ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಏಕಾಂತ ಭಾವನೆಯನ್ನು ದೂರ ಮಾಡಿ ಬದುಕಿನ ಮೇಲೆ ಹೊಸ ಭರವಸೆಯನ್ನು ಮೂಡಿಸುತ್ತದೆ. ಯೋಗವು ಕೇವಲ ದೈಹಿಕ ಆರೋಗ್ಯವನ್ನು ಕಾಪಾಡುವುದಲ್ಲದೆ ಕುಟುಂಬವನ್ನು ಒಂದಾಗಿಸುವ ಶಕ್ತಿಯನ್ನೂ ಹೊಂದಿದೆ ಎಂದು ಹೇಳಿದರು.
ವಿಶ್ವ ಯೋಗ ದಿನದಂದು ಎಲ್ಲರೂ ಹಿರಿಯರನ್ನು ಗೌರವಿಸಿ, ಪ್ರೀತಿಸಿ, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ಮೂಲಕ ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್.ಕೆ. ಶ್ರೀನಿವಾಸ್, ಉಪ್ಪಾರಕೆ ಗೌಡ, ವಿರೂಪಾಕ್ಷ, ಗೋವಿಂದರಾಜು, ಮಂಜು, ಬಿ.ವಿ. ಲೋಕೇಶ್, ಆರ್.ಎಂ. ಸಿದ್ದಯ್ಯ, ಪ್ರಕಾಶ್, ಮೊಗಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
