ಕೊರಟಗೆರೆ: ಹಿಂದೂ ಸಂಪ್ರದಾಯದಲ್ಲಿ ದೇವಭಾಷೆ ಎಂದು ಉಲ್ಲೇಖಿಸಲ್ಪಟ್ಟಿರುವ ಸಂಸ್ಕೃತವು ಭಾರತೀಯ ಎಲ್ಲಾ ಭಾಷೆಗಳ ಜನನಿಯಾಗಿದೆ. ಈ ಭಾಷೆಯನ್ನು ದೇಶಾದ್ಯಂತ ಇನ್ನಷ್ಟು ಪ್ರಚುರಪಡಿಸುವ ಮತ್ತು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ಕೊರಟಗೆರೆ,ತಾಲ್ಲೂಕಿನ ಎಲೆರಾಂಪುರದ ಶ್ರೀ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ “ರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕ ಮಹಾಧಿವೇಶನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತವನ್ನು ಕೇವಲ ಅಂಕ ಗಳಿಸುವ ಅಥವಾ ಒಂದು ಭಾಷೆಯನ್ನಾಗಿ ಮಕ್ಕಳಿಗೆ ಕಲಿಸಬಾರದು. ಅದು ನಮ್ಮ ಬದುಕಿನ ಸಂಸ್ಕೃತಿ ಎನ್ನುವ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕು. ರಾಜ್ಯದ ಪ್ರತಿಯೊಬ್ಬ ಸಂಸ್ಕೃತ ಶಿಕ್ಷಕರೂ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಎಂದು ಸಚಿವರು ಸಲಹೆ ನೀಡಿದರು.

ಇದೇ ವೇಳೆ ಎಲೆರಾಂಪುರ ಮಠದ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದ ಅವರು, ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಹನುಮಂತನಾಥ ಸ್ವಾಮೀಜಿಯವರು ಮಠ ಸ್ಥಾಪನೆಯಾದ ಅತ್ಯಲ್ಪ ಅವಧಿಯಲ್ಲಿಯೇ ಹತ್ತು ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವ ಇಂತಹ ಬೃಹತ್ ಶಿಕ್ಷಕರ ಕಾರ್ಯಾಗಾರಕ್ಕೆ ಮಠವು ಆತಿಥ್ಯ ವಹಿಸಿರುವುದು ಉತ್ತಮ ಕಾರ್ಯ ಎಂದರು
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಹನುಮಂತನಾಥ ಮಹಾಸ್ವಾಮೀಜಿ, “ಸಂಸ್ಕೃತ ಭಾಷೆಯಿಂದ ಜೀವನೋಪಾಯ ಕಂಡುಕೊಳ್ಳುತ್ತಿರುವ ಪ್ರತಿಯೊಬ್ಬ ಶಿಕ್ಷಕರೂ ಭಾಷೆಯನ್ನು ಉಳಿಸಿ, ಬೆಳೆಸುವ ಕಾಯಕದಲ್ಲಿ ಸಂಪೂರ್ಣವಾಗಿ ನಿರತರಾಗಬೇಕು. ಶಿಕ್ಷಕರ ಸಂಘಟನೆಗಳು ಕೇವಲ ಬೇಡಿಕೆಗಳ ಈಡೇರಿಕೆಗೆ ಸೀಮಿತವಾಗದೆ, ಸಂಸ್ಕೃತ ಕಲಿಕೆಯನ್ನು ಉತ್ತೇಜಿಸಲು ಹೊಸ ಯೋಜನೆಗಳನ್ನು ರೂಪಿಸಬೇಕು, ಎಂದು ಕರೆ ನೀಡಿದರು.

ದೇವಭಾಷೆಯನ್ನು ಕಲಿಸುತ್ತಿರುವ ಶಿಕ್ಷಕರು ಹೆಮ್ಮೆ ಪಡಬೇಕು. ಇಂದು ದೇಶ-ವಿದೇಶಗಳಲ್ಲಿ ಸಂಸ್ಕೃತಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಶಿಕ್ಷಕರು ಯಾವುದೇ ಫಲಾಪೇಕ್ಷೆ ಯಿಲ್ಲದೆ ತಮ್ಮ ಕೊನೆಯ ಉಸಿರಿರುವವರೆಗೂ ಜ್ಞಾನದಾನದ ಕಾಯಕವನ್ನು ಮುಂದುವರಿಸಬೇಕು. ಸಂಸ್ಕೃತ ಮತ್ತು ಶಿಕ್ಷಕರ ಏಳಿಗೆಗೆ ಮಠವು ಸದಾ ಜೊತೆಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್. ಅಹಲ್ಯಾ ಮಾತನಾಡಿ, “ಸಮಾಜವು ಸಂಸ್ಕೃತ ಶಿಕ್ಷಕರನ್ನು ವಿಶೇಷ ಗೌರವದಿಂದ ಕಾಣುತ್ತದೆ. ಸಂಸ್ಕೃತ ಕಲಿತವರು ಸಂಸ್ಕಾರವಂತರಾಗಿರುತ್ತಾರೆ ಎಂಬ ನಂಬಿಕೆಯನ್ನು ಶಿಕ್ಷಕರು ಉಳಿಸಿಕೊಳ್ಳಬೇಕು. ಇಂದು ರಾಜ್ಯದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಲವು ಏಕೋಪಾಧ್ಯಾಯ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಈ ದುಸ್ಥಿತಿ ಸಂಸ್ಕೃತ ಶಾಲೆಗಳಿಗೆ ಬರಬಾರದು. ಈಗಿನ ಆಧುನಿಕ ಯುಗದಲ್ಲಿ ಸಂಸ್ಕೃತ ಪಾಠವನ್ನು ಕೇವಲ ಪುಸ್ತಕಕ್ಕಷ್ಟೇ ಸೀಮಿತಗೊಳಿಸದೆ, ಮೊಬೈಲ್ ಆಪ್ ಹಾಗೂ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಕ್ಕಳಿಗೆ ಆಕರ್ಷಕವಾಗಿ ಕಲಿಸಬೇಕು, ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಕೃತ ವಿವಿಯ ಕುಲಸಚಿವ ವಿ. ಗಿರೀಶ್, ನಿರ್ದೇಶಕ ಪ್ರೊ. ಸಿ. ಪಾಲಯ್ಯ, ಹಣಕಾಸು ಅಧಿಕಾರಿ ಐ. ಶೃತಿ, ಶಿವಸಂಗಮ ಸಮೂಹ ಸಂಸ್ಥೆಯ ಸಂಸ್ಥಾಪಕ ಜಿ.ಎಂ. ಪಲ್ಲೇದ್, ಮಠದ ಸಂಸ್ಕೃತ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಡಾ. ಸಿ. ನಂಜುಂಡಯ್ಯ, ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹೆಚ್.ಬಿ. ಗಂಗಾಧರಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಸಂಸ್ಕೃತ ಶಿಕ್ಷಕರು ಇದ್ದರು.
ವರದಿ ನರಸಿಂಹಯ್ಯ ಹೊಸಕೋಟೆ
