ಕೊರಟಗೆರೆ: ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಕೊರಟಗೆರೆ ತಾಲ್ಲೂಕಿನಲ್ಲಿ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಮತದಾನದಲ್ಲಿ ಪದವೀಧರ ಮತದಾರರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು.
ಬಿಜೆಪಿ–ಜೆಡಿಎಸ್ ಮೈತ್ರಿಕೂಟದ (ಎನ್ಡಿಎ) ಅಧಿಕೃತ ಅಭ್ಯರ್ಥಿ ಕೆ.ಎಸ್. ಸುರೇಶ್ ಅವರ ಗೆಲುವಿಗಾಗಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರು. ಕ್ಷೇತ್ರದಲ್ಲಿ ಎನ್ಡಿಎ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿತ್ತು.

ಎನ್ಡಿಎ ಅಭ್ಯರ್ಥಿ ಪರವಾಗಿ ಸಮಾಜಸೇವಕ ಹಾಗೂ ಜೆಡಿಎಸ್ನ ಪ್ರಬಲ ಆಕಾಂಕ್ಷಿ ಪಿ.ಎನ್.ಕೆ. ಕೃಷ್ಣಮೂರ್ತಿ ಅವರು ಕೊರಟಗೆರೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ತಾಲ್ಲೂಕಿನ ಐದು ಮತಗಟ್ಟೆಗಳಿಗೆ ಭೇಟಿ ನೀಡಿ, ಮೈತ್ರಿಕೂಟದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು.

ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಅವರ ಹಕ್ಕುಗಳು ಮತ್ತು ಹಿತಾಸಕ್ತಿಗಳ ರಕ್ಷಣೆಗೆ ಬದ್ಧರಾಗಿರುವ ಸಮರ್ಥ ನಾಯಕನನ್ನು ಬೆಂಬಲಿಸುವಂತೆ ಪಿ.ಎನ್.ಕೆ. ಕೃಷ್ಣಮೂರ್ತಿ ಮತದಾರರಲ್ಲಿ ಮನವಿ ಮಾಡಿದರು. ಎನ್ಡಿಎ ಅಭ್ಯರ್ಥಿಯ ಗೆಲುವಿಗಾಗಿ ಮೈತ್ರಿಕೂಟದ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದ್ದು, ಅಭ್ಯರ್ಥಿಯ ಗೆಲುವಿನ ಬಗ್ಗೆ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜಣ್ಣ, ಅನಿಲ್ ಕುಮಾರ್, ರುದ್ರೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ದೊಡ್ಡಯ್ಯ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಕೆ.ಎಸ್. ಸುರೇಶ್ ಅವರ ಗೆಲುವಿಗಾಗಿ ಶ್ರಮಿಸಿದರು.
ವರದಿ: ನರಸಿಂಹಯ್ಯ ಹೊಸಕೋಟೆ
