ಬೆಂಗಳೂರು: Darshan Thoogudeepa ವಿರುದ್ಧದ Renuka Swamy murder case ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ್ದು, ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಾತ್ಕಾಲಿಕವಾಗಿ ಪರಿಗಣಿಸದೇ ಮುಂದೂಡಿದೆ. ಪ್ರಕರಣದ ವಿಚಾರಣೆಯನ್ನು ವೇಗಗೊಳಿಸುವಂತೆ ನಿರ್ದೇಶಿಸಿರುವ ನ್ಯಾಯಾಲಯ, ಮುಂದಿನ ಒಂದು ವರ್ಷದಲ್ಲಿ 60 ಪ್ರಮುಖ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸುವಂತೆ ಆದೇಶಿಸಿದೆ.
ನ್ಯಾಯಮೂರ್ತಿ Justice J.B. Pardiwala ಹಾಗೂ Justice Vijay Bishnoi ಅವರ ದ್ವಿಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ದರ್ಶನ್ ಪರವಾಗಿ ಹಿರಿಯ ವಕೀಲ Mukul Rohatgi ವಾದ ಮಂಡಿಸಿದರೆ, ಸರ್ಕಾರದ ಪರವಾಗಿ Siddharth Luthra ಹಾಜರಾಗಿ ಪ್ರತಿವಾದ ಮಂಡಿಸಿದರು.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಜೈಲಿನಲ್ಲಿ ಮೂಲ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಹಾಗೂ ಇನ್ನೂ ಕ್ವಾರಂಟೈನ್ ಸೆಲ್ನಲ್ಲೇ ಇರಿಸಲಾಗಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜೈಲು ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಉಲ್ಲೇಖಿಸಿರುವುದಾಗಿ ತಿಳಿಸಿತು. ಕುಟುಂಬ ಸದಸ್ಯರ ಭೇಟಿಗೆ ಈಗಾಗಲೇ 70 ಬಾರಿ ಅವಕಾಶ ನೀಡಲಾಗಿದೆ ಎಂಬ ಮಾಹಿತಿಯನ್ನೂ ನ್ಯಾಯಪೀಠ ಉಲ್ಲೇಖಿಸಿತು.
ಪ್ರಕರಣದ ಸಾಕ್ಷ್ಯ ವಿಚಾರಣೆ ವಿಳಂಬವಾಗುತ್ತಿರುವುದರ ಕುರಿತೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. 272 ಸಾಕ್ಷ್ಯಗಳಲ್ಲಿ ಕೇವಲ 10 ಸಾಕ್ಷ್ಯಗಳ ವಿಚಾರಣೆ ಮಾತ್ರ ನಡೆದಿರುವುದಾಗಿ ದರ್ಶನ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಸಿಕ್ಯೂಷನ್ ಪರ ವಕೀಲರು, ಒಂದು ವರ್ಷದೊಳಗೆ 60 ಪ್ರಮುಖ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಪ್ರಾಸಿಕ್ಯೂಷನ್ ಪರ ವಕೀಲ ಸಿದ್ಧಾರ್ಥ್ ಲೂಥ್ರಾ, “ಆರೋಪಿಗಳು ಸಾಕ್ಷ್ಯಗಳಿಗೆ ಏನು ಮಾಡಿದ್ದಾರೆ ಎಂಬುದನ್ನು ಇಲ್ಲಿ ಹೇಳುವುದಿಲ್ಲ. ಹೇಳಿದರೆ ಜಾಮೀನು ಅರ್ಜಿಯೇ ರದ್ದಾಗುವ ಪರಿಸ್ಥಿತಿ ಬರುತ್ತದೆ” ಎಂದು ಕಠಿಣವಾಗಿ ಪ್ರತಿಕ್ರಿಯಿಸಿದರು.
ನಂತರ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್, ಅನಗತ್ಯ ಕಾರಣ ನೀಡಿ ವಿಚಾರಣೆಯನ್ನು ಮುಂದೂಡಬಾರದು ಎಂದು ಸೂಚನೆ ನೀಡಿತು. ಒಂದು ವರ್ಷದ ನಂತರವೇ ಜಾಮೀನು ಅರ್ಜಿಯನ್ನು ಮರುಪರಿಶೀಲಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿತು. ಅದುವರೆಗೆ ವಿಚಾರಣಾ ನ್ಯಾಯಾಲಯದಲ್ಲಿಯೂ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದೆ.
ಇದರೊಂದಿಗೆ ನಟ ದರ್ಶನ್ ಕನಿಷ್ಠ ಇನ್ನೊಂದು ವರ್ಷ ನ್ಯಾಯಾಂಗ ಬಂಧನದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
