ಹಾಸನದ ಅನಂತು ಮತ್ತು ಸುಮಂತ ಬಾಲ್ಯದ ಗೆಳೆಯರು. ಅನಂತು ಮನೆ ಹುಣಸಿನಕೆರೆ ಬಡಾವಣೆಯಲ್ಲಿದೆ. ಸುಮಂತನ ಮನೆ ರಾಜಕುಮಾರ್ ನಗರದಲ್ಲಿದೆ. ರಾಜಕುಮಾರ್ ನಗರದಿಂದ ಬಿ.ಎಂ.ರಸ್ತೆ ತನಕ ಹೊಸದಾಗಿ 80 ಅಡಿ ರಸ್ತೆ ನಿರ್ಮಿಸಿ ವಾಹನಗಳ ಓಡಾಟ ಹೆಚ್ಚಾಗಿತ್ತು.
ಹುಣಸಿನಕೆರೆ ಬಡಾವಣೆಯಲ್ಲಿ ಹೊಸದಾಗಿ ಡಾ. ಅಬ್ದುಲ್ ಕಲಾಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಅಲ್ಲಿ ಶುಕ್ರವಾರ ಸಂಜೆ ಇಬ್ಬರು ಪಾರ್ಕಿನಲ್ಲಿ ಹೊಸದಾಗಿ ಬೆಳೆಸಿದ್ದ ಹುಣಸೆಮರದ ಕೆಳಗೆ ಕುಳಿತು ಉಭಯ ಕುಶಲೋಪರಿ ಮಾತುಕತೆ ನಡೆಸಿದ್ದರು.
ಅನಂತು ಹೇಳಿದ “ಮದುವೆಯಾಗಿ ಹತ್ತು ವರ್ಷ ಆಯ್ತು. ನಾನು ಈಗಲೂ ಒಬ್ಬಳನ್ನು ಪ್ರೀತಿಸ್ತಿದ್ದೀನಿ.. ಸುಮಂತನಿಗೆ ಆಶ್ಚರ್ಯವಾಯಿತು. “ಹೌದ..? ನಿನ್ನ ಹೆಂಡ್ತಿನ ನೀನು ಅಷ್ಟೊಂದು ಪ್ರೀತಿಸ್ತೀಯಾ..?
“ಹೆಂಡತಿನ ಯಾರದ್ರು ಪ್ರೀತಿ ಮಾಡ್ತಾರಾ ಮಿತ್ರ..? ಹಂಡತಿ ಹತ್ತಿರ ನಿತ್ಯ ಜಗಳ ಕಾಯ್ದು ಅನಂತು ಸತ್ಯವಾಗಲೂ ಬೇಸೆತ್ತಿದ್ದಾನೆ.
“ಹಾಗಾದ್ರೇ ಅವಳು ಬೇರೇನಾ..ಯಾರು ಅವಳು..? ತೀವ್ರ ಕುತೂಹಲ ಸುಮಂತನಿಗೆ.
“ ಅವಳ್ಯಾರು ಅಂತ ಹೇಳಿದ್ರೇ ನನ್ನ ಹಂಡತಿ ಕಿಕ್ ಔಟ್ ಮಾಡ್ತಾಳೆ.. ಹೇಳಲಾಗದ ಸಂಕಟ ಅನಂತುಗೆ.
“ ನೀನು ಹಾಸ್ಯ ಸಾಹಿತಿಯಾಗಿ ಒಳ್ಳೆಯ ಹೆಸರು ಮಾಡಿದ್ದೀಯ. ನಿನ್ನ ಹಾಸ್ಯ ಬರಹಗಳ ಐವತ್ತು ಪುಸ್ತಕಗಳು ಪ್ರಕಟವಾಗಿವೆ ನಿಜ. ಆದರೆ ಇದಾದ ಮೇಲೆ ನಿನ್ನಲ್ಲಿ ಆಗಿರುವ ಬದಲಾವಣೆ ಆದರೂ ಏನು ಮಾರಾಯ..? ಸುಮಂತನಿಗೆ ತಿಳಿದುಕೊಳ್ಳುವ ಕುತೂಹಲ.
“ಮೊದಲು ನಾನು ಬರೆಯಲು ಖುರ್ಚಿ ಮತು ್ತಟೇಬಲ್ ಮಾತ್ರ ಉಪಯೋಗಿಸುತ್ತಿದ್ದೆ. ಈಗ ನೆಲದ ಮೇಲೆ ಕುಳಿತೇ ಬರಿತ್ತಿದ್ದಿನಿ. ಬೆನ್ನು ಇನ್ನು ಬಾಗಿಲ್ಲ. ತಲೆ ಕೂದಲಿಗೆ ಮಾತ್ರ ಕಪ್ಪು ಬಣ್ಣ ಹಚ್ಚಿದ್ದೇನೆ. ನನ್ನ ಹಾಸ್ಯ ಬರಹಕ್ಕೆ ಅಲ್ಲಾ.. ತಲೆ ಸವರಿಕೊಂಡ ಅನಂತು.
“ನಿನ್ನ ಹೆಂಡತಿಗೆ ಅವಳಿ ಜವಳಿ ಮಕ್ಕಳಾಯಿತು ಅಂತ ಕೇಳಿ ತುಂಬಾ ಸಂತೋಷ ಆಯಿತು ಮಾರಾಯ. ಆದರೆ ಪಾಪ ಸಿಜೇರಿಯನ್ಗೆ ತುಂಬಾ ಹಣ ಖರ್ಚಾಗಿದೆಯೆಂದು ತಿಳಿದು ಬೇಸರ ಕೂಡ ಆಯ್ತು..ವಿಷಾದ ವ್ಯಕ್ತಪಡಿಸಿದ ಸುಮಂತ.
“ ಆದ್ರೂ ಒಂದೇ ಖರ್ಚಿನಲ್ಲಿ ಎರಡು ಮಕ್ಕಳಾಯಿತ್ತಲ್ಲ ಅದೇ ಸಂತೋಷ … ವಿಷಾದ ನಗೆ ನಕ್ಕ ಅನಂತು.
“ ನೆನ್ನೆ ನನಗೆ ತುಂಬಾ ಬೇಜಾರಾಗಿತ್ತು. ಅದಕ್ಕೆ ಬಾರ್ ಗೆ ಹೋಗಿ ಎರಡು ಪೆಗ್ ಕುಡಿದೆ.. ನಾಲಿಗೆ ಚಪ್ಪರಿಸಿದ ಸುಮಂತ. ಎಲ್ಲಾ ಬಡ್ಡಿ ಮಗನೇ, ನನ್ನ ಕರೆಯದೇ ಹೋಗಿದ್ದಿಯಾ ಚಾಂಡಲ ಎಂದುಕೊಂಡ ಅನಂತು “ಹೌದಾ..! ಏನಾಗಿದೆ ನಿನಗೆ..? ಎಂದು ಕೇಳಿದ.
“ ನನ್ನ ಹೆಂಡತಿ ಎರಡು ತಿಂಗಳ ಹಿಂದೆ ತಾಯಿ ಮನೆಗೆ ಹೋದವಳು ತಿರುಗಿ ಬಂದಿಲ್ಲ.. ಸುಮಂತನಿಗೆ ಹೆಂಡತಿ ಅಡುಗೆ ಉಂಡು ಅಭ್ಯಾಸ. ಹೋಟೆಲ್ ಊಟ ರುಚಿಸುತ್ತಿಲ್ಲ.
“ ಎಂತಹ ಅದೃಷ್ಟವಂತನಯ್ಯ ನೀನು. ನನ್ನ ದುರಾದೃಷ್ಟ ನೋಡು ನನ್ನ ಹೆಂಡತಿ ಕತ್ತು ಹಿಡಿದು ದಬ್ಬಿದರೂ ತೌರಿಗೆ ಅಂತ ಈ ಊರು ಬಿಟ್ಟು ಹೋಗ್ತಿಲ್ಲ. ಅವಳ ಕಾಟ ತಡೆಯಲಾಗದೆ ಬಾರ್ಗೆ ಕುಡಿಯೋಕೆ ರಾತ್ರಿ ಹೋಗ್ತ ಇದ್ದಿನಿ. ಬಾ ಕಂಪನಿ ಕೊಡು.? ಅನಂತು ಕರೆ ಕೊಟ್ಟ.
“ಷಹಜಹಾನ್ ತಾಜ್ ಮಹಲ್ ಏಕೆ ಕಟ್ಟಿಸಿದ ಗೊತ್ತಾ ದೋಸ್ತಾ.. ಸುಮಂತನ ಪ್ರಶ್ನೆ ಅನಂತುಗೆ ಅರ್ಥವಾಗದೆ “ಹೆಂಡತಿಯ ಮೇಲೆ ತುಂಬಾ ಪ್ರೀತಿ ಇತ್ತು ಅದಕ್ಕೆ ಅಲ್ವಾ ..?
“ನನಗೇನೋ ಅನುಮಾನ. ಹೆಂಡತಿ ಸತ್ತ ಖುಷಿಗೂ ಏಕಿರಬಾರದು…? ಎಂದು ಅನುಮಾನ ವ್ಯಕ್ತಪಡಿಸಿದ ಸುಮಂತ “ಇಬ್ಬರು ಹೆಂಗಸರು ನನ್ನ ಗೆಳಯ ಶಶಿಕಾಂತನ ಬದುಕನ್ನು ನರಕ ಮಾಡಿಬಿಟ್ಟರು ಮಾರಾಯ.. ಎಂದ.
“ ಯಾರಪ್ಪ ಆ ಪುಣ್ಯಾತಗಿತ್ತಿಯರು..? ಅನಂತುಗೆ ಕುತೂಹಲ.
“ ಶಶಿಕಾಂತನ ಮೊದಲನೇ ಹೆಂಡತಿ ಸಾಯುವ ತನಕ ಕಾಟ ಕೊಟ್ಟಳು. ಈಗ ಎರಡನೇ ಹೆಂಡತಿ ಕಾಟ ತಡೆಯಲಾರದೆ ಶಶಿಯ ಜೀವನ ನರಕ ಆಗಿದೆ.. ವಿಷಾದ ವ್ಯಕ್ತಪಡಿಸಿದ ಸುಮಂತ “ ಏನಯ್ಯ, ನಿನ್ನ ಮಿತ್ರ ಪ್ರಾಣಕಾಂತ ಮದುವೆ ಮಾಡಿಕೊಂಡನೋ ಅಥವಾ ಈಗಲೂ ಅವನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾನೋ…?
“ಎರಡು ಪ್ರಶ್ನೆಗಳನ್ನು ಒಟ್ಟಿಗೆ ಕೇಳಿದ್ರೇ ಹೇಗೆ ಫ್ರೆಂಡ್. ನಿನ್ನ ಎರಡು ಪ್ರಶ್ನೆಗಳಿಗೂ ಒಂದೇ ಉತ್ತರ ಹೌದು.. ಎಂದ ಅನಂತು.
“ ನನ್ನ ಹೆಂಡತಿ ತುಂಬಾ ಸೋಮಾರಿ. ಆದರೆ ತಾಯಿ ಮನೆಗೆ ಹೋಗು ಅಂದ್ರೇ ಮಾತ್ರ ಬೇಗ ಸೀರೆಗಳನ್ನು ಬ್ಯಾಗಿಗೆ ತುಂಬಿಕೊಂಡು ರೆಡಿಯಾಗ್ತಾಳೆ ಗೆಳೆಯ..ಸುಮಂತ ಸಂಕಟ ತೋಡಿಕೊಂಡ.
“ನನ್ನ ಹೆಂಡತಿ ಇನ್ನೂ ಸೋಮಾರಿ ಮಾರಾಯ. ತಾಯಿ ಮನೆಲೇ ಐದಾರು ಸೀರೆ ಇಟ್ಟರ್ತಾಳೆ. ನಿಜಕತೆ ಹೇಳಿದ ಅನಂತು.
“ ನೀನು ಬರೆದಿರುವ ವ್ಯಂಗ್ಯಚಿತ್ರಕ್ಕೆ ಬಹುಮಾನ ಬಂದಿದೆ. ಕಂಗ್ರಾಚುಲೇಶನ್..
“ ಎಲ್ಲಾ ಇದೇ ರೀತಿ ಹೇಳ್ತಿದ್ದಾರೆ. ಆದರ ನಾನು ವ್ಯಂಗ್ಯಚಿತ್ರವನ್ನೇ ಬರೆದಿಲ್ಲ..
“ ಮತ್ತೆ ಬಹುಮಾನ ಹೇಗೆ ಬಂತು..?
“ಪತ್ರಿಕೆಯವರು ವ್ಯಂಗ್ಯಚಿತ್ರ ಸ್ಫರ್ಧೆ ಮತ್ತು ಕಥಾ ಸ್ಫರ್ಧೆ ಎರಡನ್ನೂ ಯುಗಾದಿ ವಿಶೇಷಾಂಕಕ್ಕೆ ಕರೆದಿದ್ರು. ನಾನು ಕಥೆ ಜೊತೆಗೆ ನನ್ನ ಪೋಟೊ ಕಳಿಸಿದ್ದೆ. ನನ್ನ ಪೋಟೋನೇ ವ್ಯಂಗ್ಯಚಿತ್ರವೆAದು ತಪ್ಪಾಗಿ ಭಾವಿಸಿ ಬಹುಮಾನ ಕೊಟ್ಟಿದ್ದಾರೆ.
–
ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್. ಹಾಸನ-573201.
