ಹಾಸನದ ಹೃದಯ ಭಾಗದಲ್ಲಿ ಮಹಾರಾಜ ಪಾರ್ಕ್ ಇದೆ. ಬಿರು ಬೇಸಿಗೆ ಬಿಸಲಿಗೆ ಬಸವಳಿದ ಜನ ಇಲ್ಲಿ ಬೆಳೆದ ಬೃಹತ್ ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿರುತ್ತಾರೆ. ಅಂತೆಯೇ ನಮ್ಮ ಕಥಾ ನಾಯಕನು ಇದೇ ಪಾರ್ಕಿನಲ್ಲಿ ಕಾಲು ನೀಡಿ ಮಲಗಿ ಹುಲ್ಲುಕಡ್ಡಿ ಹಲ್ಲಿಗೆ ಚುಚ್ಚುಕೊಳ್ಳುತ್ತಿದ್ದಾನೆ.
“ ಏನ್ರಿ ಒಬ್ಬರೆ ಕುಳಿತು ಆಕಾಶವೇ ತಲೆಯ ಮೇಲೆ ಬಿದ್ದಂತೆ ತುಂಬಾ ಗಂಭೀರವಾಗಿ ಯೋಚಿಸುತ್ತಿದ್ದೀರಿ. ನಮ್ಮ ಮಹಾರಾಜ ಪಾರ್ಕಿನ ಹೂಗಳ ಪರಿಮಳ ಹೀರುತ್ತಿದೀರಿ..ಟೂತ್ ಪೇಸ್ಟ್ ನಗೆ ಬೀರುತ್ತಾ ಸನಿಹಕ್ಕೆ ಬಂದಳು ಶಾಂತಿ.
ಈ ಪಾರ್ಕಿನ ಹೂವುಗಳ ಪರಿಮಳದೊಂದಿಗೆ ಈಗ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿರುವ ಯಾವ ಕಂಪನಿಯ ಪೇಸ್ ಪೌಡರೋ..? ನಾ ಕಾಣೆ, ಆದರೆ ನಿಮ್ಮ ಮುಖದ ಕಡೆಯಿಂದ ತೇಲಿಬಂದ ಸುಗಂಧದ ಪರಿಮಳ ಸೇವಿಸಿ ತನ್ನ ಸಿಂಬಳ ಸುರಿಸುವ ಮೂಗು ಪಾವನವಾಯಿತು..ನಾಟಕೀಯವಾಗಿ ಸೀನಿದನು ರಾಜನ್. ಅಹಾ..ನೀವು ರಸಿಕರ ರಾಜ..ನಾನಿಲ್ಲಿ ಕೂರಬಹುದೇ..? ತನ್ನ ಮಿನಿ ಪರ್ಸ್ನಿಂದ ಖರ್ಚಿಪ್ ತೆಗೆದಳು ಯುವರಾಣಿ.
ಕೂರಬಹುದು ರಾಣಿಯವರೇ. ಈಗ ಯಾವ ಮಹಾರಾಜರ ಆಳ್ವಿಕೆಯೂ ಇಲ್ಲ. ಆದರೆ ಪಾರ್ಕಿಗೆ ಹೆಸರು ಮಾತ್ರ ಮಹಾರಾಜ ಪಾರ್ಕ್! ಈ ಪಾರ್ಕು ಈಗ ನಗರಸಭೆಯ ಸ್ವತ್ತು. ಇಲ್ಲಿ ಪ್ರಜೆಗಳು ಯಾರು ಬೇಕಾದರೂ ಕುಳಿತು ಟೈಂ ಪಾಸ್ ಮಾಡಬಹುದು ನಾವು ಕೂಡ.. ತಾನು ಕೂಡ ಎದ್ದು ಕುಳಿತನು.
ಮಳೆರಾಯನ ಕೃಪೆಯಿಂದ ಬೆಳೆಯುವ ಹಸಿರು ಹುಲ್ಲನ್ನು ದನಕರುಗಳು ಮೆಯ್ಯಬೇಕು. ಪಾಪ ಅವುಗಳ ಹೊಟ್ಟೆಯ ಮೇಲೆ ಹೊಡೆದು ತಾವು ಮೆಯ್ಯುತ್ತಿರುವಿರಿ.. ಆ ಕಡೆ ಪಾರ್ಕಿನಲ್ಲಿ ಯಾವುದೋ ಒಂದು ಹಸು ಬೇಲಿ ನುಗ್ಗಿ ದಾಟಿ ಬಂದು ಹುಲ್ಲು ಮೇಯ್ಯುತ್ತಿರುವುದು ಶಾಂತಿಗೆ ಕಾಣಿಸಿತು.
ಹೊಟ್ಟೆ ಚೆನ್ನಾಗಿರಲು ಹಸಿ ತರಕಾರಿ ತಿನ್ನಬೇಕೆಂದು ನಾಟಿ ವೈದ್ಯರು ಹೇಳಿದ್ದರು. ದನಕರಗಳು ತಾವು ತಿಂದ ಮೇವುಗಳನ್ನು ರಾತ್ರಿ ಮೆಲುಕು ಹಾಕುವುದಿಲ್ಲವೇ. ಅಂತೆಯೇ ನೆನಪುಗಳನ್ನು ಮೆಲುಕು ಹಾಕಲು ಹುಲ್ಲು ಮೇಯ್ಯುತ್ತಿರುವೆನು.. ತುಟಿಯಿಂದ ನಾಲಿಗೆ ಸವರಿಕೊಂಡನು ರಾಜನ್.
ತಾವುಗಳು ಯಾವ ಮಧುರ ನೆನಪುಗಳನ್ನು ಮೆಲುಕು ಹಾಕುತ್ತಿರುವಿರೋ..? ಹುಲ್ಲುಹಾಸಿನ ಮೇಲೆ ಕುಳಿತಳು ಶಾಂತಿ.
ನೆನಪುಗಳು ಸಾವಿರ ಇರುತ್ತವೆ. ಅವುಗಳನ್ನೆಲ್ಲಾ ಈಗಲೇ ಹೇಳಲೇ. ಅಥವಾ ಲಕ್ಷಿö್ಮ ಬಾರಮ್ಮ ಟಿವಿ ಧಾರಾವಾಹಿಗಳಂತೆ ಸಾವಿರ ಕಂತುಗಳಲ್ಲಿ ಹೇಳಲೇ.. ಸೀರಿಯಲ್ ಕಿಲ್ಲರ್ ರಾಜನ್.
ಸಮಯಕ್ಕೆ ತಕ್ಕಂತೆ ಬುರುಡೆ ಚೆನ್ನಾಗಿ ಬಿಡುವಿರಿ..ಬುರುಡೆ ದಾಸ.. ಇವನನ್ನು ತನ್ನ ದಾಸನನ್ನಾಗಿ ಮಾಡಿಕೊಳ್ಳಬೇಕೆಂದು ದೂರದ ಆಲೋಚನೆ ಶಾಂತಿಯದು.
ಮಾತಿನಲ್ಲಿ ನಾನು ಬುರುಡೆ ಬಿಡಬಹುದು. ಆದರೆ ಓದಿನಲ್ಲಿ ನಾನು ಮಣ್ಣಿನ ಮಡಕೆ..ತಲೆಗೂದಲು ಸವರಿಕೊಂಡನು.
ಐ ಲೈಕ್ ಯುವರ್ ಹಾರ್ಟ್ ಫೆಲ್ಟ್ ಟಾಕ್ ! ಆಗ ತಾನೇ ಪಿಯುಸಿ ರಿಸಲ್ಟ್ ಬಂದು ಶಾಂತಿ ಪಾಸಾಗಿದ್ದಳು.
ಹೋ.. ನನ್ನ ಹೃದಯಮಂದಿರದಲ್ಲಿ ಆಂಗ್ಲರ ಬಾವುಟವನ್ನು ಹಾರಿಸಿಬಿಟ್ಟಿರಿ. ಸೋತೆನು ಈ ವೀರ ಕನ್ನಡಿಗನು..
ಎದ್ದು ನಿಂತು ತಲೆಬಾಗಿದನು ಆಟೋರಾಜನು. ಕಾರು ಬಾಡಿಗೆ ಜೊತೆಗೆ ಆಟೋ ಕೂಡ ಬಾಡಿಗೆಗೆ ಓಡಿಸುತ್ತಿದ್ದನು.
ರ್ವಾಗಿಲ್ವೆ, ನೀವು ಕಾರು ಓಡಿಸುವುದರಲ್ಲಿ ಮಾತ್ರ ನಿಪುಣರು ಎಂದುಕೊಂಡಿದ್ದೆ. ಮಾತಿನಲ್ಲೂ ಜಾಣರು. ಅಂದ್ಹಾಗೆ ತಾವು ಕಾರು ರೇಸಿನಲ್ಲಿ ಗೆದ್ದಿರುವುದಕ್ಕೆ ನನ್ನ ಅಭಿನಂದನೆಗಳು..
ರಾಜು ಕಾರು ಮಾಲೀಕನೆಂದೇ ನಂಬಿಹಳು ಶಾಂತಿ.
ಓಂ.. ಶಾಂತಿಯವರೇ, ನಾನು ಮಾತಿನಲ್ಲಿ ಜಾಣನು ಸರಿಯೇ. ಆದರೆ ಕಾಸು ಬಿಚ್ಚುವುದರಲ್ಲಿ ಬಲೇ ಜಿಪುಣನು.. ಜೇಬಿಗೆ ಕೈ ಹಾಕಿ ನೋಡಿಕೊಳ್ಳುವನು. ಬರೇ ನೂರು ರೂ. ಮಟಮಟ ಮದ್ಯಾಹ್ನ. ಪಾರ್ಕ್ ಪಕ್ಕ ಸಹ್ಯಾದ್ರಿ ರಸ್ತೆಯಲ್ಲಿ ಫುಡ್ ಕೋರ್ಟಿನಲ್ಲಿ ಪಾನಿಪುರಿ ತಿನ್ನಿಸಬಹುದು. ಆದರೆ ಅಷ್ಟಕ್ಕೆ ಆಕೆ ತೃಪ್ತಳಾಗದಿದ್ದರೆ ಮತ್ತೇನಾದರೂ ಕೇಳಿದರೆ ಮರ್ಯಾದೆ ರಸ್ತೆ ಪಾಲೇ ಸೈ.. ಯೋಚಿಸುತ್ತಿರುವನು.
ಈಗ ಏಕೆ ಈ ಮಾತು ನಾನು ಅರಿಯೆನು..? ಅನುಮಾನಂ ಪೆದ್ದ ರೋಗಂ.
ನಾನು ಕಾರು ರೇಸಿನಲ್ಲಿ ಗೆದ್ದಿರುವುದಕ್ಕೆ ನೀವೇನಾದರೂ ಸಿಹಿ ತಿಂಡಿ ಕೊಡಿಸಬೇಕೆಂದು ಕೇಳಿದರೆ ಕೊಡಿಸಲು ನನ್ನ ಬಳಿ ಕಾಸಿಲ್ಲವೇ.. ರಾಜನ್ ಚಾಕ್ಲೇಟ್ ಹೀರೋ ಸರಿಯೇ.
ಛೇ..ಛೇ.. ನೀವು ಗೆದ್ದಿರುವುದಕ್ಕೆ ನಾನೇ ನಿಮಗೆ ಸ್ವೀಟ್ಸ್ ಕೊಡಿಸಬೇಕಲ್ಲವೇ! ಅದು ಬಿಟ್ಟು ನಾನೇ ನಿಮ್ಮನ್ನು ಸ್ವೀಟ್ಸ್ ಕೇಳುವುದು ತಪ್ಪಲವೇ..! ಸಕ್ಕರೆಯ ಅಕ್ಕರೆ ಮಾತು. ರಿಯಲಿ ಸ್ವೀಟ್ ಹುಡುಗಿ ಶಾಂತಿ.
ನಿಮ್ಮ ಮಾತು ತಪ್ಪೋ ಸರಿಯೋ ನಾನರಿಯೇ. ಆದರೆ ನೋಡಿ ನಮ್ಮ ಪರಂಪರೆ ತುಂಬಾ ವಿಚಿತ್ರವೇ. ಉದಾಹರಣೆಗೆ ನೀವು ಓದಿನಲ್ಲಿ ಬುದ್ದಿವಂತರು. ಚೆನ್ನಾಗಿ ಓದುತ್ತೀರಾ. ಬರೆಯುತ್ತೀರಾ. ಮೊದಲನೇ ದರ್ಜೆಯಲ್ಲಿ ಪಾಸು ಆಗ್ತೀರಾ. ನೀವು ಹಗಲು ರಾತ್ರಿ ಕಷ್ಟಪಟ್ಟು ಓದಿ ಫಸ್ಟ್ಕ್ಲಾಸ್ ಬಂದಿರೋದನ್ನು ಮನಗಾಣದೇ ನಾವೇ ನಿಮ್ಮನ್ನು ಸ್ವೀಟ್ಸ್ ಕೊಡ್ಸಿ ಅಂತ ಪೀಡಿಸ್ತೀವಿ. ಇದು ತಪ್ಪು. ನೀವು ಚೆನ್ನಾಗಿ ಓದಬೇಕು. ಒಳ್ಳೆಯ ವೃತ್ತಿಗೆ ಸೇರಬೇಕು. ಆಗ ನಾನು ನಿಮಗೆ ಸ್ವೀಟ್ಸ್.. ಕಥಾನಾಯಕನದು ಐದು ವರ್ಷದ ಭರವಸೆ.
ನಿಮ್ಮ ಪಂಚವಾರ್ಷಿಕ ಯೋಜನೆ ಮಾತಿಗೆ ಸ್ವಲ್ಪ ಕಡಿವಾಣ ಹಾಕಿ. ಈಗ ನನ್ನ ಬಳಿಯೂ ಕಾಸಿಲ್ಲ… ಮಿನಿ ಪರ್ಸನಲ್ಲಿ ಮನಿ ಇಲ್ಲ ಎಂಬುದು ಆಕೆಗೆ ಗೊತ್ತಿದೆ.
ರೀ ಬೇಜಾರು ಮಾಡ್ಕೋಬೇಡಿ. ಇವತ್ತು ನನ್ನ ಬಳಿಯೂ ಹಣವಿಲ್ಲ. ನಾಳೆ ನಿಮಗೆ ಖಂಡಿತ ಸ್ವೀಟ್ಸ್ ಜೊತೆಗೆ ಐಸ್ ಕ್ರೀಮ್ ಎರಡೂ ಕೊಡಿಸುತ್ತೇನೆ…
ನಿಮ್ಮ ಉಚಿತ ಮಾತು ಇಲ್ಲಿಗೆ ನಿಲ್ಲಿಸಿ. ನಾಳೆ ನಿಮ್ಮ ಜೊತೆ ಮಾತನಾಡಲು ನನ್ನ ನಂಬರ್ಗೆ ಪೋನ್ ಮಾಡಬೇಕು. ಈಗ ನಾನು ನೈಸ್ ರೋಡಿನಲ್ಲಿ ನಡೆದು ಸಿಟಿ ಬಸ್ ನಿಲ್ದಾಣಕ್ಕೆ ಹೋಗುವೆನು.
ಹೋಗಿ. ಈಗ ನನ್ನ ಹತ್ತಿರ ಸ್ಮಾರ್ಟ್ ಪೋನ್ ಇಲ್ರೀ. ಕೀ ಪ್ಯಾಡ್..
ಓ ಸ್ಯಾಡ್.! ಹುಡುಗಿಯರ ಹತ್ತಿರ ಮಾತನಾಡಬೇಕು ಅಂದ್ರೇ ಸ್ಮಾರ್ಟ್ ಪೋನ್ ತಗೋಬೇಕ್ರೀ.. ಈ ಸುಡು ಬಿಸಿಲಿನಲ್ಲಿ ಉರಿವ ಜೋಳದ ವ್ಯರ್ಥ ಮಾತುಗಳು.. ಸತ್ಯ ಅರಿತಳು ಶಾಂತಿ.
ಮೊಬೈಲ್ ಯಾವುದು ತಗೊಂಡ್ರೇ ಒಳ್ಳೆಯದು ರೀ.. ಛೇ! ತರಲೇ ರಾಜನ್
ಮೊಬೈಲ್ ಯಾವುದು ಬೇಕಾದ್ರು ತೆಗೆದುಕೊಳ್ಳಿ. ಆದರೆ ಕರೆನ್ಸಿ ಮಾತ್ರ ಹಾಕಿಸಿಕೊಳ್ಳಿ. ಈಗ ನಾನು ಹೊರಟೆ.. ಊರಿಗೆ ಹೊರಟಳು.
ರೀ, ನಾಳೆನೂ ಇಲ್ಲೇ ಕಾಯ್ತರ್ತಿನಿ.. ರ್ತೀರಿ ತಾನೆ.. ?
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.
