ತುಮಕೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಗೋ ಮೂತ್ರ ಮತ್ತು ಗಂಗಾಜಲದಿಂದ ಸ್ವಚ್ಚಗೊಳಿಸಿದ ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸುವಂತೆ ಒತ್ತಾಯಿಸಿದ ರಾಹುಲ್ಗಾಂಧಿ ಅವರ ವಿರುದ್ಧವೇ ಎಫ್.ಐ.ಆರ್.ದಾಖಲಿಸಿರುವುದನ್ನು ಖಂಡಿಸಿ, ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್ರವರು,ನ್ಯಾಯ ಕೇಳಿದ ನಮ್ಮ ನಾಯಕರಾದ ರಾಹುಲ್ಗಾಂಧಿ ಅವರ ಮೇಲೆಯೇ ಎಫ್.ಐ.ಆರ್. ಹಾಕಿರುವುದು ಹಾಸ್ಯಾಸ್ಪದವಾಗಿದೆ.ದೇಶದಲ್ಲಿ ಅಸ್ಪೃಷ್ಯತೆ ಜೀವಂತ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಸ್ವಾತಂತ್ರ ಬಂದು ಏಳು ದಶಕಗಳು ಕಳೆದಿದ್ದರೂ, ಇಂದಿಗೂ ಜನರ ಮನಸ್ಥಿತಿ ಬದಲಾಗದಿರುವುದು ನಿಜಕ್ಕೂ ವಿಷಾದನೀಯ.
ಸರಕಾರ ಈ ಕೂಡಲೇ ಎಐಸಿಸಿ ಅಧ್ಯಕ್ಷರು ಭಾಷಣ ಮಾಡಿದ ಜಾಗವನ್ನು ಸ್ವಚ್ಚಗೊಳಿಸಿದ ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸಬೇಕು. ಹಾಗೆಯೇ ನಮ್ಮ ನಾಯಕರಾದ ರಾಹುಲ್ಗಾಂಧಿ ಅವರ ಮೇಲೆ ದಾಖಲಿಸಿರುವ ಎಫ್.ಐ.ಆರ್ರದ್ದು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು, ಹೊಬಳಿ ಮಟ್ಟದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಖೇತರಾಜ್ ಮೌರ್ಯ, ಜಿಲ್ಲಾಕಾಂಗ್ರೆಸ್ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿದರು, ಪ್ರತಿಭಟನೆಯಲ್ಲಿ ಸಿಮೆಂಟ್ ಮಂಜುನಾಥ್,ಹೆಚ್.ಸಿ.ಹನುಮಂತಯ್ಯ,ಸಿದ್ದಲಿಂಗೇಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ಮಹೇಶ್,ಜಿಲ್ಲಾ ವಕ್ತಾರರಾದ ಕೆ.ಎಂ.ಸುಜಾತ ಪಾಲ್ಗೊಂಡಿದ್ದರು.
– ಕೆ.ಬಿ.ಚಂದ್ರಚೂಡ
