ತುಮಕೂರು:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ)ನ ಶ್ರೀಮತಿ ಡಾ||ಹೇಮಾವತಿ.ವಿ.ಹೆಗ್ಗಡೆರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಕೇಂದ್ರದಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಪ್ರತಿ ತಿಂಗಳು ಪ್ರಸ್ತುತ ಹಲವು ವಿಷಯಗಳನ್ನು ತಿಳಿಸುತ್ತಾ ಅವರಿಗೆ ಜ್ಞಾನದಾಸೋಹವನ್ನು ನೀಡುತ್ತಿದೆ,ಒಂದು ಕಡೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಶೈಕ್ಷಣಿಕ ಸೇವೆ ಮಾಡುತ್ತಿದೆ,ಮತ್ತೊಂದು ಕಡೆ ಸಾಮಾಜಿಕ ಸೇವೆ ಮಾಡುತ್ತಿದೆ.
ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ತುಂಬಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಸಾಲವಾಗಿ ನೀಡಿ ಅವರಲ್ಲಿ ಆರ್ಥಿಕ ಚೈತನ್ಯ ತುಂಬುತ್ತಿದ್ದರೆ,ಜ್ಞಾನ ವಿಕಾಸ ಕೇಂದ್ರದ ಮೂಲಕ ಹಳ್ಳಿಗಾಡಿನ ಮಹಿಳೆಯರಿಗೆ ಕಾನೂನು,ಜ್ವಲಂತ ಸಮಸ್ಯೆಗಳು,ಶೈಕ್ಷಣಿಕ ವಿಚಾರ,ಆರೋಗ್ಯ ವಿಚಾರ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸುತ್ತಿದೆ ಎಂದು ಹಿರಿಯ ಪತ್ರಕರ್ತ ಮತ್ತು ವಕೀಲರಾದ ಕೆ.ಬಿ.ಚಂದ್ರಚೂಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ತಾಲ್ಲೋಕಿನ ಮಲ್ಲಸಂದ್ರಗ್ರಾಮದ ದೊಡ್ಡಮ್ಮದೇವಿಯ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷರಾದ ಜಯಣ್ಣನವರು ಶ್ರೀ ಧರ್ಮಸ್ಥಳ ಸಂಸ್ಥೆ ಮತ್ತು ಡಾ||ಡಿ.ವೀರೇಂದ್ರಹೆಗ್ಗಡೆರವರು ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನು ನೀಡುತ್ತಿದ್ದಾರೆ,ಸರ್ಕಾರ ಮಾಡದ ಕಾರ್ಯಗಳನ್ನು ಪೂಜ್ಯ ಹೆಗ್ಗಡೆರವರು ಮಾಡುತ್ತಿದ್ದಾರೆ ಈ ಹಿಂದೆ ಹಳ್ಳಿಯ ಜನರು ಮೀಟರ್ ಬಡ್ಡಿಗೆ ಸಿಕ್ಕು ಸಮಸ್ಯೆಗಳನ್ನು ಎದುರಿಸುತ್ತಿದ್ದರು ಆದರೆ ಈಗ ಸಂಸ್ಥೆಯು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಗೆ ಸಾಲವನ್ನು ಒದಗಿಸಿ ಹಳ್ಳಿ ಜನರ ನೆಮ್ಮದಿ ಜೀವನಕ್ಕೆ ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರುದ್ರಾಣಮ್ಮನವರು ಡಿ.ವೀರೇಂದ್ರಹೆಗ್ಗಡೆರವರ ದೂರದೃಷ್ಟಿತ್ವದಿಂದ ನಮ್ಮೆಲ್ಲರ ಜೀವನ ಹಸನಾಗಿದೆ,ಆರ್ಥಿಕವಾಗಿ ಮುಂದುವರೆಯಲು ರಾಜ್ಯದಲ್ಲಿ ಪೂಜ್ಯರು ಸಾವಿರಾರು ಕೋಟಿ ರೂಪಾಯಿಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ನಮಗೆ ನೀಡಿದೆ,ಮಹಿಳಾ ಸಬಲೀಕರಣ ಆಗಿದೆ,ವೃದ್ಧರಿಗೆ ಮಾಸಾಶನ,ಕೆರೆ ಅಭಿವೃದ್ಧಿ,ಶುದ್ಧಗಂಗಾ ಹೀಗೆ ನೂರಾರು ಕಾರ್ಯಕ್ರಮಗಳನ್ನು ನೀಡುತ್ತಾ ಸಮಾಜದ ಅಭಿವೃದ್ಧಿಗೆ ಆಶೀರ್ವದಿಸುತ್ತಿದ್ದಾರೆ ಪೂಜ್ಯ ಹೆಗ್ಗಡೆ ದಂಪತಿಗಳಿಗೆ ಗ್ರಾಮೀಣ ಮಹಿಳೆಯರ ಪರವಾಗಿ,ನಮ್ಮ ಗ್ರಾಮದ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿಕಾತ್ಯಾಯಿನಿ,ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿಬಿ.ಎಸ್.ನೇತ್ರ,ಸೇವಾಪ್ರತಿನಿಧಿಗಳು,ಸದಸ್ಯರು ಹಾಜರಿದ್ದರು.ಸಂಘದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
-ಚಂದ್ರಚೂಡ ಕೆ.ಬಿ.
