ತುಮಕೂರು : ಆಗಸ್ಟ್ 21 ರಿಂದ 3 ದಿನಗಳು ನಡೆಯುವ ಸುಪ್ರೀಂ ಕೋರ್ಟ್ನ ವಿಶೇಷ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ.ಅನುಸಿವರಾಮನ್ ತಿಳಿಸಿದ್ದಾರೆ.

ಬೆಂಗಳೂರಿನ ಉಚ್ಛನ್ಯಾಯಾಲಯದಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಾದ್ಯಂತ ಸುದ್ದಿಗೋಷ್ಠಿ ನಡೆಸಿದ ಅವರು, ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣಗಳು ಬಾಕಿಯಿದ್ದು, ಹೊರ ರಾಜ್ಯದ ಕಕ್ಷಿದಾರರು ನ್ಯಾಯಾಲಯಕ್ಕೆ ಸಕಾಲಕ್ಕೆ ಹಾಜರಾಗದೆ ಪ್ರಕರಣಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದ ಕಕ್ಷಿದಾರರಿಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಆದೇಶದಂತೆ ‘ಸಮಾಧಾನ್ ಸಮರೋಹ್’ ಕಾರ್ಯಕ್ರಮದ ಮೂಲಕ ಆಗಸ್ಟ್ 21 ರಿಂದ 3 ದಿನಗಳು ವಿಶೇಷ ಲೋಕ್ ಅದಾಲತ್ ನಡೆಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪೂರ್ವ ಸಂಧಾನ ಕಾರ್ಯಕ್ರಮಗಳು ನಡೆದು ಆಗಸ್ಟ್ 21 ರಿಂದ 3 ದಿನಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕಕ್ಷಿದಾರರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾ. ಆರ್.ದೇವದಾಸ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಹೆಚ್. ಶಶಿಧರ್ಶೆಟ್ಟಿ ಇದ್ದರು.
ಮುಂದುವರೆದು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿದ್ದು, ಸುಪ್ರೀಂ ಕೋರ್ಟ್ನಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ 4328 ಪ್ರಕರಣಗಳು ಇದ್ದು, ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ 101 ಪ್ರಕರಣಗಳು ಬಾಕಿ ಇರುತ್ತವೆ. ಸುಪ್ರೀಂ ಕೋರ್ಟ್ನಲ್ಲಿ ನಿರ್ದಿಷ್ಟ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗುತ್ತಿದ್ದು, ಸಂಬAಧಿಸಿದ ಪ್ರಕರಣಗಳಿಗೆ ಜಿಲ್ಲೆಯ ಕಕ್ಷಿದಾರರಿಗೆ ನೋಟಿಸ್ ಜಾರಿಗೊಳಿಸಿ ಶುಕ್ರವಾರದಿಂದಲೇ ಪೂರ್ವ ಸಂಧಾನ ಸಭೆಯನ್ನು ನಡೆಸಲಾಗುವುದು. ಅಲ್ಲದೆ, ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಪ್ರಕರಣಗಳಿದ್ದಲ್ಲಿ ಸಂಬಂಧಿಸಿದ ಪಕ್ಷಗಾರರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಹಾಜರಾಗಿ ತಮ್ಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಪ್ರಕರಣಗಳಿಗೆ ಸಂಬಂಧಿಸಿದಂತೆ ಪಕ್ಷಗಾರರು ದೆಹಲಿಗೆ ಹೋಗಲು ಸಾಧ್ಯವಾಗದಿರುವ ಕಾರಣ ‘ಸಮಾಧಾನ್ ಸಮಾರೋಹ್’ ಕಾರ್ಯಕ್ರಮದ ಮೂಲಕ ತಮ್ಮ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಸದಾವಕಾಶವಾಗಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಅವರು ಕರೆ ನೀಡಿದ್ದಾರೆ
ವರದಿ : ಕೆ ಬಿ ಚಂದ್ರಚೂಡ್
