ತುಮಕೂರು: ಕುಣಿಗಲ್ ತಾ ಹುಲಿಯೂರುದುರ್ಗ ಹೋಬಳಿ ಕಾಚಿಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ 6ಜನ ಅಣ್ಣತಮ್ಮಂದಿರ ಪೈಕಿ ಹೊನ್ನಯ್ಯ,ಕೃಷ್ಣಪ್ಪ ತಮ್ಮಪಿತ್ರಾರ್ಜಿತ ಆಸ್ತಿಯನ್ನು ವಿಭಾಗ ಮಾಡಿಕೊಂಡು ಜೀವನ ನಡೆಸುತ್ತಿದ್ದು ಕೃಷ್ಣಪ್ಪ ತನ್ನ ಜಮೀನಿನಲ್ಲಿ ತೆಂಗಿನ ಸಸಿಗಳನ್ನು ನೆಟ್ಟಾಗ ಹೊನ್ನಯ್ಯ ರವರು ಕಿತ್ತು ಹಾಕಿದ್ದು, ಈ ಜಮೀನು ವಿಚಾರದಲ್ಲಿ ಪರಸ್ಪರ ದ್ವೇಷ ಇದ್ದು, ದಿನಾಂಕ:11-04-2021 ರಂದು ಬೆಳಗ್ಗೆ ಸುಮಾರು 10.30 ಗಂಟೆಯ ಸಮಯದಲ್ಲಿ ಹರಿಪ್ರಸಾದ್ ಮತ್ತು ಪಾರ್ವತಮ್ಮ ರವರು ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿ, ಕಂಚಿಹಳ್ಳಿ ಗ್ರಾಮದ ತಮ್ಮ ಜಮೀನಿನ ಬಳಿ ಹಸು ಮೇಯಿಸುತ್ತಿದ್ದಾಗ ಆರೋಪಿ ಹರೀಶ ಎನ್ನುವವರು ಪಾರ್ವತಮ್ಮನವರ ಮೇಲೆ ಏಕಾಏಕಿ ದೈಹಿಕ ಹಲ್ಲೆ ಮಾಡಿ ನಂತರ ಮೃತ ಕಂಭೇಗೌಡ@ಶಶಿರವರನ್ನು ಶಶಿಯ ಬಲಗಡೆಯ ಕುತ್ತಿಗೆಗೆ, ಬಲಕೈಗೆ, ಎಡಕೈಗೆ ಬಲವಾಗಿ 5-6 ಬಾರಿ ಹೊಡೆದಿರುತ್ತಾನೆ.
ಈ ಹಲ್ಲೆಯಿಂದಾಗಿ ಮೃತನಿಗೆ ಮಾರಣಾಂತಿಕ ಪೆಟ್ಟು ಬಿದ್ದು, ಮೃತಪಟ್ಟಿದ್ದುಆರೋಪಿ ಲಾಂಗ್ ನಿಂದ ಕೊಲೆ ಮಾಡಿರುತ್ತಾನೆ,ಆರೋಪಿಗೆ ಇತರೆ ಆರೋಪಿಗಳು ಸಹ ಕುಮ್ಮಕ್ಕು ನೀಡಿದ್ದು ದೃಢಪಟ್ಟ ಹಿನ್ನಲೆಯಲ್ಲಿ ಆರೋಪಿತರು ಶಿಕ್ಷಾರ್ಹ ಅಪರಾಧವೆಸಗಿರುವುದು ದೃಢಪಟ್ಟ ಮೇರೆಗೆ ಆರೋಪಿತರ ವಿರುದ್ಧ ಹುಲಿಯೂರುದುರ್ಗ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ಆರಕ್ಷಕ ವೃತ್ತ ನಿರೀಕ್ಷಕರಾದ ಗುರುಪ್ರಸಾದ್ ವಿ.ಎಂ. ಇವರು ತನಿಖೆ ಪೂರೈಸಿ ಮಾನ್ಯ ನ್ಯಾಯಾಲಯಕ್ಕೆ ಕಲಂ 143, 147, 148, 307, 302, 149, 323, 114 ಐಪಿಸಿ ಅಡಿಯಲ್ಲಿನ ಅಪರಾಧಕ್ಕಾಗಿ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣವು ತುಮಕೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಅಭಿಯೋಜನೆ ಪರ ವಿಚಾರಣೆ ಮಾಡಲಾದ ಸಾಕ್ಷಿ ವಿಚಾರಣೆಯಿಂದ ಹಾಜರುಪಡಿಸಿದ ಸಾಕ್ಷ್ಯಾಧಾರಗಳಿಂದ 1ನೇ ಆರೋಪಿ ಹರೀಶ.ಕೆ ವಿರುದ್ಧ ಆರೋಪ ದೃಢಪಟ್ಟ ಮೇರೆಗೆ ದಿನಾಂಕ 28-08-2026 ರಂದು 1ನೇ ಆರೋಪಿ ಹರೀಶ ಈತನಿಗೆ ಕೇಸ್ ಸಂಖ್ಯೆ ಎಸ್.ಸಿ.75/2021 ರಲ್ಲಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಬಿ.ಜಯಂತಕುಮಾರ್ ರವರು ಕಲಂ 324 ಐಪಿಸಿ ಅಪರಾಧಕ್ಕಾಗಿ ಒಂದು ವರ್ಷ ಸಾದಾ ಶಿಕ್ಷೆ ಹಾಗೂ ರೂ.5000/- ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಒಂದು ತಿಂಗಳ ಸಾದಾ ಸಜೆಯನ್ನು ಹಾಗೂ ಕಲಂ 302 ಐಪಿಸಿ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ ರೂ.10000/- ದಂಡ, ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆಯನ್ನು ವಿಧಿಸಿ ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಆರ್.ಟಿ.ಅರುಣರವರು ತಮ್ಮ ವಾದವನ್ನು ಮಂಡಿಸಿರುತ್ತಾರೆ.
ವರದಿ : ಕೆ ಬಿ ಚಂದ್ರಚೂಡ್
