ತುಮಕೂರು – ಕಾನೂನು ಎನ್ನುವುದು ಒಂದು ಸಾಮಾನ್ಯ ಜ್ಞಾನ. ಕಾನೂನಿನ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಸುನಿಲ್.ಎಸ್. ಹೊಸಮನಿ ಹೇಳಿದರು.
ನಗರದ ಎಸ್ಐಟಿ ಕ್ಯಾಂಪಸ್ನಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆ, ಶ್ರೀ ಕೃಷ್ಣ ಕಾನೂನು ಕಾಲೇಜು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನನ್ನು ಪ್ರತಿಯೊಬ್ಬರು ಅರಿತಿರಬೇಕು. ನಾವು ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ಕಾನೂನು ರಕ್ಷಣೆಯ ಹಕ್ಕನ್ನು ಪಡೆದುಕೊಂಡಿರುತ್ತೇವೆ. ಪ್ರತಿಯೊಬ್ಬರಿಗೂ ಈ ಹಕ್ಕು ತಾವು ಸಾಯುವವರೆಗೂ ಇರುತ್ತದೆ. ಭ್ರೂಣ ಪತ್ತೆ ಹಾಗೂ ಹತ್ಯೆ ಮಾಡುವುದು ಕಾನೂನು ಪ್ರಕಾರ ತಪುö್ಪ. ಒಂದು ವೇಳೆ ಹಾಗೆ ಮಾಡಿದಲ್ಲಿ ಅವರಿಗೆ ಕಾನೂನಿನಲ್ಲಿ ಜೈಲು ಶಿಕ್ಷೆಗೆ ಒಳಗಾಗ ಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯ ಬೇಡ ಅನ್ಯರಿಗೆ ಅಸಹ್ಯಪಡ ಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರAಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲ ಸಂಗಮ ದೇವರನೊಲಿಸುವ ಪರಿ ಎಂದು ಹನ್ನೆರಡನೆ ಶತಮಾನದಲ್ಲಿಯೇ ಬಸವಣ್ಣನವರು ಕಾನೂನು ಒಳಗೊಂಡಂತೆ ತಮ್ಮ ವಚನದಲ್ಲಿ ಸಾಮಾನ್ಯ ಜ್ಞಾನವನ್ನು ತಿಳಿಸಿದ್ದಾರೆ. ಕಾನೂನು ಎನ್ನುವುದು ಒಂದು ಸಾಮಾನ್ಯ ಜ್ಞಾನ ಎಂದು ಅವರು ತಿಳಿಸಿದರು.
ಮೋಟಾರು ವಾಹನ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಕಾಯ್ದೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ ಅವರು, ಕಾಯ್ದೆಯಿಂದ ಇರುವ ರಕ್ಷಣೆ ಹಾಗೂ ಶಿಕ್ಷೆ, ದಂಡದ ಬಗ್ಗೆ ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಲೋಕೇಶ್ ಧನಪಾಲ್ ಹವಾಲೆ ಮಾತನಾಡಿ, ಬಾಲ್ಯ ವಿವಾಹವು ಕಾನೂನಿನ ರೀತ್ಯ ಅಪರಾಧವಾಗಿದ್ದು, ಇದನ್ನು ತಡೆಗಟ್ಟಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಪ್ರತಿಯೊಬ್ಬರಿಗೂ ಕಾನೂನು ಅರಿವು-ನೆರವು ಮೂಡಿಸುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹೊಣೆಯಾಗಿದೆ. ಇಲ್ಲಿ ಉಚಿತವಾಗಿ ಸಲಹೆಗಳನ್ನು ನೀಡಲಾಗುತ್ತದೆ. ನಮ್ಮ ಪ್ರಾಧಿಕಾರ ಇರುವುದೇ ಕಾನೂನಿನ ಅವಶ್ಯಕತೆ ಯಾರಿಗೆಲ್ಲ ಇದೆಯೋ ಅವರಿಗೆಲ್ಲ ನೆರವು ನೀಡುವ ಉದ್ದೇಶ ನಮ್ಮ ಪ್ರಾಧಿಕಾರದ್ದಾಗಿದೆ. ಎಲ್ಲರೂ ಇದರ ನೆರವನ್ನು ಪಡೆಯಬೇಕು ಎಂದು ತಿಳಿಸಿದರು.
ಲೈಂಗಿಕ ಅಪರಾಧಗಳಿಂದ ಮಕ್ಕಳರಕ್ಷಣೆ (ಪೋಕ್ಸೋ) ಕಾಯ್ದೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ಯಾನಲ್ ವಕೀಲರಾದ ಆಶಾ ಕೆ.ಎಸ್. ಮಾತನಾಡಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಹಿರಿಯ ವಕೀಲರಾದ ಮರಿಚನ್ನಮ್ಮ ಮಾತನಾಡಿ, ಕಾನೂನನ್ನು ಎಲ್ಲರೂ ಸರಿಯಾಗಿ ತಿಳಿಬೇಕು ಹಾಗೂ ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಎನ್ಸಿಸಿ ಮುಖ್ಯಸ್ಥ ಅನಿಲ್ಕುಮಾರ, ಯೋಗೀಶ್ ಕೆ.ಡಿ., ಡಾ.ವಿನೆಟ್ ವಿಮಲ, ಮಂಜುಳಾ, ಮತ್ತಿತರರು ಉಪಸ್ಥಿತರಿದ್ದರು.
