ತುಮಕೂರು : ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಹಣಕಾಸು ನೇರವು, ಮಾರುಕಟ್ಟೆಯ ವಿಸ್ತರಣೆ ಮತ್ತು ಅಮದು ನೀತಿಗಳ ಕುರಿತು ಚರ್ಚೆ ನಡೆಸಲು 2026ರ ಮೇ. 22ರಿಂದ 24ರವರೆಗೆ ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ದಕ್ಷಿಣ ಭಾರತ ಮಟ್ಟದ ಎಂ.ಎಸ್.ಎಂ.ಇ ಕೈಗಾರಿಕೆಗಳನ್ನು ಸಮಾವೇಶ ಹಾಗೂ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷರಾಧ ಬಿ.ಆರ್.ಗಣೇಶರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯದ 130ಕ್ಕೂ ಹೆಚ್ಚು ಸ್ಮಾಲ್ ಮತ್ತು 12 ಹೆವಿ ಇಂಡಸ್ಟ್ರಿಯಲ್ ಗಳು ತಮ್ಮ ಮಳಿಗೆ ತೆರೆದು ಸಮಾವೇಶ ಮತ್ತು ವಸ್ತು ಪ್ರದರ್ಶನಕ್ಕೆ ಬರುವ ಜನರಿಗೆ ಮಾಹಿತಿ ನೀಡಲಿದ್ದಾರೆ.ದಕ್ಷಿಣ ಭಾರತದ ರಾಜ್ಯಗಳ ಎಲ್ಲಾ ಪ್ರತಿನಿಧಿಗಳು ಹಾಗೂ ಕೈಗಾರಿಕೆಗಳ ಮುಖ್ಯಸ್ಥರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕಾಸಿಯಾ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಕರ್ನಾಟಕ ರಾಜ್ಯದಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಪ್ರಮುಖ ಸಂಘವಾಗಿದೆ. ಕಾಸಿಯಾ ರಾಜ್ಯಾದ್ಯಂತ 13,500 ಕ್ಕೂ ಹೆಚ್ಚು ಸದಸ್ಯರನ್ನು ಮತ್ತು 138 ಸಂಯೋಜಿತ ಸಂಘಗಳ ಬಲವಾದ ಸದಸ್ಯತ್ವ ನೆಲೆಯನ್ನು ಹೊಂದಿದೆ. 1949 ರಲ್ಲಿ ಸ್ಥಾಪನೆಯಾದ ಕಾಸಿಯಾ ತನ್ನ ಆರಂಭದಿಂದಲೂ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಮತ್ತು ಇತ್ತೀಚೆಗೆ ತನ್ನ ಅಮೃತ ಮಹೋತ್ಸವ ಸಮಾರಂಭವನ್ನು ಆಚರಿಸಿದೆ.ಎಂ.ಎಸ್.ಇ. ಗಳ ಅಭಿವೃದ್ಧಿಗಾಗಿ ನೀತಿಗಳ ಮೇಲೆ ಪ್ರಭಾವ ಬೀರುವಲ್ಲಿ ಸಂಘವು ಮಹತ್ವದ ಪಾತ್ರವನ್ನು ವಹಿಸುತ್ತಿದೆ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮತ್ತು ಸಂಬಂಧಿತ ಇಲಾಖೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.ರಾಜ್ಯಾದ್ಯಂತ ಇರುವ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕೈಗೊಳ್ಳುವಲ್ಲಿ ಕಾಸಿಯಾ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದೆ ಎಂದರು.
ಅಮಾನಿಕೆರೆಯ ಗಾಜಿನ ಮನೆಯಲ್ಲಿ 150ಕ್ಕೂ ಹೆಚ್ಚು ಎಂ.ಎಸ್.ಎಂ.ಇ. ಪ್ರದರ್ಶಕರು, ನೂರಾರು ಬಿ2ಬಿ ಸಭೆಗಳು ಮತ್ತು ಚಿಂತನಶೀಲ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.ಈ ಸಮಾವೇಶವು ಉನ್ನತ ಮಟ್ಟದ ವ್ಯವಹಾರ ಜಾಲತಾಣ ನಿರ್ಮಾಣ ಮತ್ತು ಒಪ್ಪಂದಗಳ ಸಾಧನೆಗೆ ಮಹತ್ವದ ವೇದಿಕೆಯಾಗಲಿದೆ. ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಹಾಗೂ ಹೊಸ ವ್ಯಾಪಾರ ವ್ಯವಹಾರ ಅವಕಾಶಗಳನ್ನು ಕಲ್ಪಿಸಲು ಒಂದು ಸಕ್ರಿಯ ವೇದಿಕೆಯನ್ನು ಒದಗಿಸುವ ಗುರಿಯನ್ನು ಈ ಸಮಾವೇಶ ಹೊಂದಿದೆ.ಈ ಕಾರ್ಯಕ್ರಮವು ಉದ್ಯಮಿಗಳು, ಉದ್ಯಮ ಮುಖಂಡರು, ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್ಯೂಗಳು), ಹಣಕಾಸು ಸಂಸ್ಥೆಗಳು, ತಾಂತ್ರಿಕ ತಜ್ಞರು ಹಾಗೂ ಇತರ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಸಿಯಾ ಉಪಾಧ್ಯಕ್ಷರಾದ ನಿಂಗಣ್ಣ ಎಸ್.ಬೀರಾದರ್,ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹುಸೇನ್,ನಗರ ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶಕುಮಾರ್.ವಿ., ಖಜಾಂಚಿ ಆರ್.ದೊರೈ, ಉಪಸಮಿತಿ ಅಧ್ಯಕ್ಷ ಸದಾಶಿವ ಆರ್.ಅಮೀನ್, ಸಹ ಅಧ್ಯಕ್ಷ ಆನಂದರಾವ್,ಕೆ, ಉಪಸಮಿತಿಯ ಸಲಹೆಗಾರರಾದ ಶ್ರೀಕಂಠದತ್ತ ಪಿ.ಎಸ್. ಅವರುಗಳು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
