ಶ್ಲೋಕ – 14
ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಳಯಂ ಯಾತಿ ದೇಹಭೃತ್
ತದೋತ್ತಮವಿದಾಂ ಲೋಕಾನಮಲಾನ್ ಪ್ರತಿಪದ್ಯತೇ ॥೧೪॥
ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಳಯಮ್ ಯಾತಿ ದೇಹಭೃತ್ ।
ತದಾ ಉತ್ತಮವಿದಾಮ್ ಲೋಕಾನ್ ಅಮಲಾನ್ ಪ್ರತಿಪದ್ಯ ತೇ –ಸತ್ವಗುಣ ಬಲಗೊಂಡಾಗ ಜೀವಿ ಸಾವನ್ನಪ್ಪಿದರೆ, ಹಿರಿದಾದ ತತ್ವವನ್ನು- ಬಲ್ಲವರ ಕುಲದಲ್ಲಿ, ದೋಷವಿರದ ದೇಹಗಳನ್ನು ಪಡೆಯುತ್ತಾನೆ.
ನಮಗೆ ತಿಳಿದಂತೆ ಜೀವ ದೇಹವನ್ನು ಬಿಟ್ಟು ಹೊರ ಹೋಗುವ ಕೊನೆಯ ಕ್ಷಣ ಆ ಜೀವದ ಮುಂದಿನ ನಡೆಯನ್ನು ನಿರ್ಧರಿಸುತ್ತದೆ. ಅಂತ್ಯಕಾಲದಲ್ಲಿ ಸಾತ್ವಿಕವಾದ ಚಿಂತನೆಯೊಂದಿಗೆ, ಸತ್ವದ ಪ್ರಭಾವದಲ್ಲಿ ಪ್ರಾಣ ಬಿಡಲು ಸಾಧ್ಯವಾದರೆ, ಮುಂದಿನ ಜನ್ಮದಲ್ಲಿ ಯಾವುದೇ ದೋಷವಿಲ್ಲದ ಮನುಷ್ಯರಾಗಿ ಜ್ಞಾನಿಗಳ ಸಮುದಾಯದಲ್ಲಿ ಹುಟ್ಟುತ್ತೇವೆ. ಅಲ್ಲಿ ಜ್ಞಾನಿಗಳ ನಡುವೆ ಇದ್ದು, ಜ್ಞಾನವನ್ನು ಬೆಳೆಸಿಕೊಂಡು ಮತ್ತೆ ಜ್ಞಾನ ಮಾರ್ಗದಲ್ಲಿ ಎತ್ತರಕ್ಕೆರಲು ಸಾಧ್ಯವಾಗುತ್ತದೆ. ಜೀವಮಾನದಲ್ಲಿ ನಾವು ಸತ್ವಕ್ಕೆ ಒತ್ತುಕೊಟ್ಟು ಬದುಕಿದರೆ ಮಾತ್ರ ಸಾಯುವಾಗ ಸತ್ವದ ಅಧಿಷ್ಠಾನದಲ್ಲಿ ಸಾಯಲು ಸಾಧ್ಯವಾಗಬಹುದು. ಇದನ್ನು ಬಿಟ್ಟು “ಸಾಯುವಾಗ ಸಾತ್ವಿಕ ಚಿಂತನೆ ಬಗ್ಗೆ ಯೋಚಿಸೋಣ” ಎಂದು ಬದುಕಿದರೆ, ಸತ್ವದ ಪ್ರಭಾವದಲ್ಲಿ ಸಾಯುವುದು ಅಸಾಧ್ಯ.
