ಹಾಸನದ ಎಲೈಟ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಜಾವಗಲ್ ಪ್ರಸನ್ನರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು ಹಸಿರೇ ಉಸಿರು, ಹಸಿರಿದ್ದರೆ ಮಾತ್ರ ನಾವೆಲ್ಲರೂ ಬದುಕಲು ಸಾಧ್ಯ, ಇಲ್ಲವಾದರೆ ನಾವೆಲ್ಲಾ ನಾಶ ಹೊಂದುತ್ತೇವೆ. ಇಂದು ಮನುಷ್ಯ ತನ್ನ ಆಸೆ ಆಕಾಂಕ್ಷೆಗಳಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಇದು ಸಲ್ಲದು. ಮಾನವನ ದುರಾಸೆ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪರಿಸರ ಮತ್ತು ಹವಾಮಾನದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಮಿತಿಮೀರಿದ ಪ್ಲಾಸ್ಟಿಕ್ ಬಳಕೆ, ವಿಷಕಾರಿ ಅನಿಲಗಳಿಂದ ಇಂದಿನ ಪರಿಸರ ನಾಶವಾಗುತ್ತಿದೆ.
ಪ್ರಸ್ತುತ ದಿನಗಳಲ್ಲಿ ಪರಿಸರ ಕಾಳಜಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದ ಅವರು ನಾಡಿನ ರೈತರ ಹಾಗೂ ಸಾಲುಮರದ ತಿಮ್ಮಕ್ಕರವರ ಸಾಧನೆಗಳನ್ನು ಸ್ಮರಿಸಿದರು.
ಶಾಲಾ ಆಡಳಿತಾಧಿಕಾರಿಗಳಾದ ಶ್ರೀ ಕೆ.ಎಂ ನಾಗಾರಾಜುರವರು ಮಾತನಾಡಿ, ಪರಿಸರ ನಾಶದಿಂದ ಮುಂದಿನ ಪೀಳಿಗೆ ಬಹಳ ಕಷ್ಟ ನೋವುಗಳನ್ನು ಅನುಭವಿಸಬೇಕಾಗುತ್ತದೆ. ಪರಿಸರವನ್ನು ಉಳಿಸುವುದರ ಜೊತೆಗೆ ಸಿಗುವ ಸಂಪನ್ಮೂಲಗಳನ್ನು ಹಿತ ಮಿತವಾಗಿ ಬಳಸುವುದರೊಂದಿಗೆ ಸ್ವಚ್ಛತೆ ಹಾಗೂ ಸರಳ ಜೀವನವನ್ನು ತಮ್ಮದಾಗಿಸಿಕೊಂಡು ಸುಸಂಸ್ಕೃತರಾಗೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಕ್ರಿಸ್ಟೀನಾ ಎಸ್. ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗದವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಸಿರು ಉಡುಪುಗಳನ್ನು ಧರಿಸುವುದರ ಮೂಲಕ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
