ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಹಾಸನ ತಾಲ್ಲೂಕು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ರೋಟರಿ ಕ್ಲಬ್ ಆಫ್ ಹಾಸನ್ ಸನ್ರೈಸ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತ ಮತ್ತು ಸಂಶೋಧನಾ ಕೇಂದ್ರ, ಉಜಿರೆಯ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ 2092ನೇ ಮದ್ಯವರ್ಜನ ಶಿಬಿರ ಸೋಮವಾರ ಹಾಸನದ ಕುರುಹಿನ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆರಂಭವಾಯಿತು. ಶಿಬಿರವು ಜುಲೈ 20ರಿಂದ 27ರವರೆಗೆ ನಡೆಯಲಿದೆ.

ಕುರುಹಿನ ಶೆಟ್ಟಿ ಸಭಾಭವನದ ಅಧ್ಯಕ್ಷ ಕೆ.ಸಿ. ಕೃಷ್ಣಶೆಟ್ಟಿ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಹಾಸನ ನಗರಸಭೆ ಅಧ್ಯಕ್ಷ ಮೋಹನ್ ಆರ್. ಮಾತನಾಡಿ, ಎಂಟು ದಿನಗಳ ಮದ್ಯವರ್ಜನ ಶಿಬಿರ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಸನ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಸಂಸ್ಥೆ ನಡೆಸುತ್ತಿರುವ ಜನಜಾಗೃತಿ, ಮಹಿಳಾ ಸಬಲೀಕರಣ, ಸ್ವಸಹಾಯ ಸಂಘಗಳ ಮೂಲಕ ಸ್ವಉದ್ಯೋಗ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿವೇತನ, ಜನಮಂಗಲ, ವಾತ್ಸಲ್ಯ ಮನೆ ನಿರ್ಮಾಣ ಸೇರಿದಂತೆ ವಿವಿಧ ಸಮಾಜಮುಖಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ರೋಟರಿ ಕ್ಲಬ್ ಹಾಸನ ಅಧ್ಯಕ್ಷ ಕೆ.ಎಸ್. ಯೋಗೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಆಯೋಜಕರು ಕೃತಜ್ಞತೆ ಸಲ್ಲಿಸಿದರು.
