ಕೆ.ಆರ್.ಪೇಟೆ,ಜು.20: ಜ್ಞಾನದ ಸಂಕೇತವಾದ ಪುಸ್ತಕಕ್ಕೆ ಮೊದಲಿನಿಂದಲೂ ಅನಾಧರಾಣೆ ಬೆಳೆಸಿದ್ದರಿಂದಲೇ ಮನೆಗಳಲ್ಲಿ ಪೂಜಾ ಮಂದಿರವಿರುವಂತೆ ಗ್ರಂಥಾಲಯಕ್ಕೊಂದು ಕೊಠಡಿ ಇಲ್ಲದಂತಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.

ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಲೇಖಕ ಮೊಹಮದ್ ಅಜರುದ್ದೀನ್, ಕಲಾವಿದ ಅಭಿನಂದನ್ , ಶಶಿಧರ ಭಾರಿಘಾಟ್ ಅವರ ಮನೆ, ಮತ್ತು ಕೆ.ಆರ್.ಪೇಟೆ ಪಟ್ಟಣದಲ್ಲಿ ಲೇಖಕ ಚಾ.ಶಿ.ಜಯಕುಮಾರ್ ಮತ್ತು ಪಟ್ಟಣದ ಬಸವೇಶ್ವರನಗರದ ಕವಿಯತ್ರಿ ಧನಲಕ್ಷ್ಮಿಪ್ರಕಾಶ್ ಮನೆ ಸೇರಿದಂತೆ ಐದು ಮನೆಗಳಲ್ಲಿ ಭಾನುವಾರ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಟಾನ ಸಮಾರಂಭದಲ್ಲಿ ಗ್ರಂಥಾಲಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಕ್ತಿಯನ್ನು ಭಯದ ಸಂಕೇತವಾಗಿ ಮಾಡಿ ಜನರಲ್ಲಿ ಮೌಡ್ಯವನ್ನು ಬಿತ್ತುವ ಕಾರ್ಯ ನಡೆದಂತೆ, ಪುಸ್ತಕದ ಜ್ಞಾನವನ್ನು ಹಂಚಿ ಮಾನವರರಲ್ಲಿ ಅರಿವಿನ ಜ್ಞಾನವನ್ನು ಹೆಚ್ಚಿಸುವ ಪ್ರಯತ್ನವನ್ನು ನಮ್ಮ ಹಿರಿಯರು ಮಾಡದಿದ್ದರಿಂದ ಪುಸ್ತಕ ಸಂಸ್ಕೃತಿ ಹಾಳಾಗುತ್ತಿದೆ. ಮಂಗಳಾರತಿ ತಟ್ಟೆಗೆ, ಜೋಯಿಸರಿಗೆ ಬೇರೊಬ್ಬರು ಮೆಚ್ಚಲಿ ಎಂಬಂತೆ ದುಬಾರಿ ಕಾಣೀಕೆ ನೀಡಿ ಆಶಿರ್ವಾದ ಬೇಡುವ ನಾವು ಕಡಿಮೆ ಬೆಲೆಯ ಪುಸ್ತಕ ತೆಗೆದುಕೊಳ್ಳಲು , ದಿನಪತ್ರಿಕೆ ಕೊಂಡು ಓದುವದಿಕ್ಕೆ ಹಿಂದೆ ಮುಂದೆ ನೋಡುತ್ತೇವೆ. ಜ್ಞಾನದ ಬೂನಾದಿಯೇ ಇಲ್ಲದ ಭಕ್ತಿಯನ್ನು ಕಟ್ಟಿರುವದರಿಂದ ಸಮಾಜವು ನಡೆಯುವ ದಿಕ್ಕು ದಾರಿತಪ್ಪಿದೆ .ಇದನ್ನು ಬದಲಿಸುವ ಉದ್ದೇಶದಿಂದಲೇ ಕನ್ನಡ ಪುಸ್ತಕ ಪ್ರಾಧಿಕಾರವು ಮನೆಮನೆಗೆ ಗ್ರಂಥಾಲಯ ಅನುಷ್ಟಾನ ಮಾಡುವ ಯೋಜನೆ ರೂಪಿಸಿದ್ದು ಕನಿಷ್ಟ ಒಂದು ಲಕ್ಷ ಮನೆಮನೆಯಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುಮೋದನೆ ಪಡೆದು ಪ್ರತಿಯೊಂದು ಮನೆಯ ಗ್ರಂಥಾಲಯಕ್ಕೂ ಒಂದಿಷ್ಟು ಪುಸ್ತಕಕೊಡುವ ಕಾರ್ಯವನ್ನು ಮಾಡಲಾಗುವದು .
ಬದುಕನಲ್ಲಿ ಬದುಕುವ ಕಲೆಯನ್ನುಯಾರೂ ಹೇಳೀಕೊಡುವದಿಲ್ಲ . ಆದರೆ ಆ ಕೆಲಸವನ್ನು ಕಲಿಸಿಕೊಡುವ ಏಕೈಕ ಸಾಧನವೆಂದರೆ ಅದು ಪುಸ್ತಕವಾಗಿದೆ . ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಸ್ತಕವನ್ನು ಜ್ಞಾನದಿಂದ ತುಂಬಿಸಿಕೊಳ್ಳುವ ಕಾಯಕದಲ್ಲಿ ಪ್ರಾಧಿಕಾರದದೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಪ್ರಾಧಿಕಾರವು ನಾಲ್ಕು ವಿಭಾಗದಲ್ಲಿ ಮನೆಮನೆಯ ಗ್ರಂಥಾಲಯವನ್ನು ಪ್ರೋತ್ಸಾಹಿಸಲು ನಾಲ್ವರು ಮಹನೀಯರ ಹೆಸರಿನಲ್ಲಿ ಪ್ರಶಸ್ತಿ- ಬಹುಮಾನ ನೀಡಲು ಉದ್ದೇಶಿಸಿರುವದಲ್ಲದೆ , ಪ್ರತಿ ತಿಂಗಳು ಅಂಗಳದಲ್ಲಿ ತಿಂಗಳ ಪುಸ್ತಕ ಎಂಬ ವಿನೂತನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾಸರವಾಡಿ ಮಹಾದೇವು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವದ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ‘ನಾ ಮೆಚ್ಚಿದ ಪುಸ್ತಕ” ಕುರಿತ ಮಾಲಿಕೆಯಲ್ಲಿ ‘ ಹೇಮಾವತಿ ತೀರ’ ಕೃತಿ ಕುರಿತು ಎಸ್.ಡಿ.ಎಂ ಕಾಲೇಜಿನ ಕನ್ನಡ ಅಧ್ಯಾಪಕ ಪ್ರೊ. ಮಾರುತಿ ಪ್ರಸನ್ನ ಕುವೆಂಪು ವಿರಚಿತ ಸ್ವಾಮಿ ವಿವೇಕಾನಂದ ಕುರಿತು ನಿವೃತ್ತ ಬಿಇಓ ಚಿಕ್ಕಸ್ವಾಮಿ, ಗಾಂಧೀ ಕಥನ ಕುರಿತು ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕತ್ತರಘಟ್ಟ ವಾಸು , ಭಾವಸಂಗಮ ಕವನ ಸಂಕಲನ ಕುರಿತು ಹಾಸನ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ, ಸಾಹಿತಿ ಗೊರೂರು ಅನಂತರಾಜು ಮಾತನಾಡಿದರು.
ಪ್ರೊ.ಸುಜನಾ ಪ್ರತಿಷ್ಟಾನದ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಕಸಾಪ ಅಧ್ಯಕ್ಷ ಕೆ.ಕಾಳೇಗೌಡ, ಸಾಹಿತಿ ಗೊರೂರು ಅನಂತರಾಜು, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಕುಶಾಲ್ ಬರಗೂರು, ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಕಲಾವಿದ ಉಮಾಶಂಕರಸ್ವಾಮಿ, ಕುಮಾರ್ , ಅಕ್ಕಿಹೆಬ್ಬಾಳು ರಮೇಶ್, ಮೊಹಮದ್ ಅಜರುದ್ದೀನ್, ಅಭಿನಂದನ್ , ಚಾ.ಶಿ.ಜಯಕುಮಾರ್ , ಧನಲಕ್ಷ್ಮಿ, ಪ್ರಕಾಶ್, ವೀಣಾ ಸೇರಿದಂತೆ ಹಲವು ಗಣ್ಯರು ,ಲೋಕಾಯನ ಬಳಗದ ಸದಸ್ಯರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
