ನವದೆಹಲಿ : ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ನಡೆದಿದೆ. ಗುರುವಾರ (ಜೂ.12) ಮಧ್ಯಾಹ್ನ ನಡೆದ ಭೀಕರ ಘಟನೆಯ ವೇಳೆ ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಇದ್ದರು.
2020ರಲ್ಲಿ ಕ್ಯಾಲಿಕಟ್ ನಲ್ಲಿ ನಡೆದ ವಿಮಾನ ದುರಂತದ ಬಳಿಕ ದೇಶದಲ್ಲಿ ನಡೆದ ದೊಡ್ಡ ವಿಮಾನ ಪತನ ಘಟನೆ ಇದಾಗಿದೆ.
ಕ್ಯಾಲಿಕಟ್ ಘಟನೆಯಲ್ಲಿ 21 ಮಂದಿ ಅಸುನೀಗಿದ್ದರು.
1996 ರ ನವೆಂಬರ್ 12 ರಂದು 349 ಜನರನ್ನು ಬಲಿತೆಗೆದುಕೊಂಡ 1996 ರ ಚರ್ಖಿ ದಾದ್ರಿ ವಿಮಾನಗಳ ವಾಯುಮಾರ್ಗದ ಮಧ್ಯದ ಡಿಕ್ಕಿಯು ದೇಶದ ಅತ್ಯಂತ ಭೀಕರ ವಾಯು ದುರಂತವಾಗಿ ಉಳಿದಿದೆ.
ಕಳೆದ ದಶಕಗಳಲ್ಲಿ ಸಂಭವಿಸಿದ ಕೆಲವು ಪ್ರಮುಖ ನಾಗರಿಕ ವಾಯು ಅಪಘಾತಗಳ ಬಗ್ಗೆ ಮಾಹಿತಿ ಇಲ್ಲಿವೆ.
ಆಗಸ್ಟ್ 7, 2020, ಕ್ಯಾಲಿಕಟ್ ದುರಂತ: ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 1244 ವಿಮಾನವು ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನವಾಗಿತ್ತು. ಒದ್ದೆಯಾಗಿದ್ದ ರನ್ ವೇಯಲ್ಲಿ ಜಾರಿದ್ದ ವಿಮಾನ ಎರಡು ತುಂಡಾಗಿತ್ತು. ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿದ್ದರು.
ಮೇ 22, 2010, ಮಂಗಳೂರು ವಿಮಾನ ಅಪಘಾತ: ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 812 ಮಂಗಳೂರಿನಲ್ಲಿ ರನ್ವೇಯಿಂದ ಜಾರಿ 158 ಜನರ ಸಾವಿಗೆ ಸಂಭವಿಸಿತು. ವಿಮಾನವು ರನ್ ವೇನಿಂದ ಜಾರಿ ಕಂದಕಕ್ಕೆ ಬಿದ್ದಿತ್ತು.
ಜುಲೈ 17, 2000, ಪಾಟ್ನಾ ದುರಂತ: ಪಾಟ್ನಾದಲ್ಲಿ ಅಲೈಯನ್ಸ್ ಏರ್ ಫ್ಲೈಟ್ 7412 ರ ಬೋಯಿಂಗ್ 737 ವಿಮಾನವು ಇಳಿಯುವ ಸಮಯದಲ್ಲಿ ಪತನಗೊಂಡು 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಪೈಲಟ್ ದೋಷದಿಂದಾಗಿ ನಿಯಂತ್ರಣ ತಪ್ಪಿದ್ದೇ ಇದಕ್ಕೆ ಕಾರಣ.
ನವೆಂಬರ್ 12, 1996, ಚಖ್ರಿ ದರ್ದಿ ವಿಮಾನ ಅಪಘಾತ: ಸೌದಿ ಅರೇಬಿಯನ್ ಏರ್ಲೈನ್ಸ್ ಬೋಯಿಂಗ್ 747 ಮತ್ತು ಕಝಾಕಿಸ್ತಾನ್ ಏರ್ಲೈನ್ಸ್ ಇಲ್ಯುಶಿನ್ ಇಲ್-76 ದೆಹಲಿ ಬಳಿ ಡಿಕ್ಕಿ ಹೊಡೆದು ಎರಡೂ ವಿಮಾನಗಳಲ್ಲಿದ್ದ ಎಲ್ಲಾ 349 ಜನರು ಸಾವನ್ನಪ್ಪಿದ್ದರು. ಪೈಲಟ್ ದೋಷ ಮತ್ತು ವಾಯು ಸಂಚಾರ ನಿಯಂತ್ರಣದೊಂದಿಗೆ ಸಂವಹನದ ಕೊರತೆಯೇ ಇದಕ್ಕೆ ಕಾರಣ.
ಏಪ್ರಿಲ್ 26, 1993, ಔರಂಗಬಾದ್ ದುರಂತ: ಇಂಡಿಯನ್ ಏರ್ಲೈನ್ಸ್ ವಿಮಾನ 491 ಔರಂಗಾಬಾದ್ ನಿಂದ ಟೇಕ್ ಆಫ್ ಆದ ನಂತರ ಅಪಘಾತಕ್ಕೀಡಾಗಿ, ಟ್ರಕ್ ಮತ್ತು ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದು 55 ಜನರು ಸಾವನ್ನಪ್ಪಿದ್ದರು.
ಏಪ್ರಿಲ್ 16, 1991, ಇಂಫಾಲ್ ಏರ್ ಕ್ರ್ಯಾಶ್: ಇಂಡಿಯನ್ ಏರ್ ಲೈನ್ಸ್ ಫ್ಲೈಟ್ 257 ಇಂಫಾಲ್ ಬಳಿ ಪತನವಾಗಿ, ಅದರಲ್ಲಿದ್ದ 69 ಮಂದಿ ಸಾವನ್ನಪ್ಪಿದ್ದರು.
ಫೆಬ್ರವರಿ 14, 1990 ಬೆಂಗಳೂರು ದುರಂತ: ಇಂಡಿಯನ್ ಏರ್ ಲೈನ್ಸ್ ವಿಮಾನ 605 ಬೆಂಗಳೂರಿಗೆ ಸಮೀಪಿಸುತ್ತಿದ್ದಾಗ ಅಪಘಾತಕ್ಕೀಡಾಗಿ 92 ಜನರು ಸಾವನ್ನಪ್ಪಿದ್ದರು.
ಅಕ್ಟೋಬರ್ 19, 1988 ಅಹಮದಾಬಾದ್ ವಿಮಾನ ದುರಂತ: ಇಂಡಿಯನ್ ಏರ್ ಲೈನ್ಸ್ ವಿಮಾನ 113 ಅಹಮದಾಬಾದ್ ನಲ್ಲಿ ಪತನವಾಗಿ 133 ಮಂದಿ ಅಸುನೀಗಿದ್ದರು.
ಜೂನ್ 21, 1982, ಬಾಂಬೆ ಏರ್ ಕ್ರ್ಯಾಶ್: ಏರ್ ಇಂಡಿಯಾ ವಿಮಾನ 403 ಬಾಂಬೆ ವಿಮಾನ ನಿಲ್ದಾಣದಲ್ಲಿ ಪತನಗೊಂಡು 17 ಜನರು ಸಾವನ್ನಪ್ಪಿದರು.
ಜನವರಿ 1, 1978, ಬಾಂಬೆ ವಿಮಾನ ಅಪಘಾತ: ಏರ್ ಇಂಡಿಯಾ ವಿಮಾನ 855 ರ ಬೋಯಿಂಗ್ 747 ಮುಂಬೈನಿಂದ ಟೇಕ್ ಆಫ್ ಆದ ನಂತರ ಅರೇಬಿಯನ್ ಸಮುದ್ರಕ್ಕೆ ಅಪ್ಪಳಿಸಿತು, ವಿಮಾನದಲ್ಲಿದ್ದ ಎಲ್ಲಾ 213 ಜನರು ಕೊನೆಯುಸಿರೆಳೆದಿದ್ದರು.
