“ಹಾಸನಾಂಬೆ”
ಅದೋ… ನಮ್ಮೂರ ದೇವತೆ ಹಾಸನಾಂಬೆ. ಬಂದೇ ಬಿಟ್ಟಳು. ಕಾದೂ ಕಾದೂ ವರುಷಕೊಮ್ಮೆಯಂತೆ. ಆಶ್ಚರ್ಯ!! ನಮ್ಮಂತೆ ಅವಳಿಗೂ ಕಾತುರ. ನಮ್ಮನ್ನು ಕಾಣಲು ಹರಸಲು.
ಅಂದಿನ ದಿನಗಳಲ್ಲಿ ಅವಳನ್ನು ಕಾಣಲು ಊರಿಗೆ ಊರೇ ಆರಾಮವಾಗಿ ತಂಪಾದ ಸಮಯದಲ್ಲಿ ಅವಳನ್ನು ಕಂಡು ದಿವ್ಯ ದರ್ಶನ ಪಡೆಯುತ್ತಿದ್ದೆವು. ಅದೂ ಪ್ರತಿ ದಿನವೂ. ಅವಳ ಬಳಿಗೇ ಹೋಗಿ ನಿಂತು ಅದೆಷ್ಟು ಸಮಯ ಅವಳೊಂದಿಗೆ ಕಳೆದಿದ್ದೆವೋ… ಆದರೆ.. , ಇಂದು ಅವಳನ್ನು ಕಾಣಲು ಗಂಟೆಗಟ್ಟಲೆ ಸುಡು ಬಿಸಿಲಿನಲ್ಲಿ ನಿಂತು ಅವಳನ್ನು ಕಂಡು ಕಷ್ಟ ಕಾರ್ಪಣ್ಯಗಳ ಅವಳರಿವಿಗೆ ತಂದು , ಬಾಗಿನವ ಸಮರ್ಪಿಸಿ , ನೈವೇದ್ಯವ ನಿವೇದಿಸಿ ಬರುವುದುಂಟು. ಇಂದು ರಾಜ್ಯಾದ್ಯಂತ ಅವಳ ಭಕ್ತ ವೃಂದ. ಅವಳನ್ನರಸಿ ಬರುವರು. ಭಕ್ತರ ಕಷ್ಟ ಕೋಟಲೆಗಳನ್ನು ನಗು ಮೊಗದಿಂದಲೇ ಆಲಿಸಿ ಹಾರೈಸಿ ಆಶೀರ್ವದಿಸಿ ಕಳಿಸುವಳು ನಮ್ಮ ಮಾತೆ.
ಹಾಸನ ಜನತೆಗಷ್ಟೇ ಸೀಮಿತವಾಗಿದ್ದ ಅವಳೀಗ ಇಡೀ ರಾಜ್ಯಕ್ಕೆ ಮಾತೆಯಾಗಿ ಕಂಡು ಬರುತ್ತಿರುವುದೇ ಹೆಮ್ಮೆಯ ವಿಷಯ.
ಏನೋ… ಎಂತೋ… ನನಗೊಂದಿಷ್ಟು ಆಕೆಯ ಹೃದಯದಲ್ಲಿ ಜಾಗ ಸಿಕ್ಕಿದೆಯಲ್ಲಾ ಅಷ್ಟೇ ಸಾಕು ಎನ್ನುವ ಪ್ರತಿಯೊಬ್ಬ ಭಕ್ತರ ಮನದಲ್ಲಿ ಯಾವುದೋ ರೂಪದಲ್ಲಿ ನೆಲೆಸಿ ಶಾಂತಿ ತರುವಳು ಅಂಬೆ.

ತುಂಬಿದ ಕುಟುಂಬದಲ್ಲಿ ಜನಿಸಿದಾಕೆ. ಏಳು ಜನ ಅಕ್ಕ ತಂಗಿಯರೊಡಗೂಡಿ ನಮ್ಮ ಹಾಸನದಲ್ಲಿ ನೆಲೆಸಿರುವುದು ಎಂತಾ ಸಂತಸದ ವಿಷಯ.
ನಂದಾ ದೀಪದಂತೆ ಪ್ರತಿಯೊಬ್ಬರ ಬಾಳನ್ನು ಬೆಳಗು ತಾಯೆ. ಸಹನೆಯೇ ಮೂರ್ತಿವೆತ್ತಂತೆ ಕುಳಿತಿರುವ ನಿನ್ನ ಸ್ವಭಾವ ಪ್ರತಿಯೊಬ್ಬರಲ್ಲೂ ಬರಲಿ. ದುಃಖ ದುಮ್ಮಾನಗಳು ಸಹಜವೆಂಬ ಭಾವನೆ ಮನುಜರಲ್ಲಿ ಮೂಡಲಿ. ದ್ವೇಷಾಸೂಯೆಗಳು ತೊಲಗಲಿ. ರೋಗ ರುಜಿನಗಳು ನಾಶವಾಗಲಿ. ಹರಸಿಬಿಡು ತಾಯೆ ಒಮ್ಮೆ ನಿನ್ನ ಕಂದಮ್ಮಗಳನ್ನು. ನಿನ್ನ ದರುಶನ ಮಾತ್ರದಿಂದಲೇ ಸಕಲ ಸೌಭಾಗ್ಯಗಳೂ ಲಭಿಸುವವು. ಅಂತಾ ಅಂಬೆಗೆ ನಮೋ ನಮಃ. ತನ್ನಂತರಂಗದ ಕಪಟಗಳನ್ನೆಲ್ಲಾ ದೂರವಿರಿಸಿ ನಿಷ್ಕಲ್ಮಷ ಮನದಿಂದ ನಿನ್ನ ಬಳಿಗೆ ಬಂದು ನಮಿಸುವಂತಾಗಲಿ ತಾಯಿ ಈ ಭಕ್ತ ವೃಂದ. ಬಾಳ ಪಯಣದ ಹಾದಿಯಲ್ಲಿ ಎಲ್ಲವೂ ಸುಂದರ ಸುಲಲಿತವಾಗಿ ನೆರವೇರಲಿ ಅಂದುಕೊಂಡಿದ್ದೆಲ್ಲವೂ ಅವಳ ಕೃಪಾದೃಷ್ಟಿಗೆ ಬೀಳಲಿ ಭಕ್ತರಿಗೆ ಸಂತಸ ತರಲಿ ಹಾಸನಾಂಬೆ.ಅವಳಾಣತಿಯಂತೆ ನಡೆಯುವೆವು ನಾವು ದೈವ ಕೃಪೆಯ ಬೇಡುವೆವು ನಾವು. ಹರಸಲಿ ಆಶೀರ್ವದಿಸಲಿ ಸಾಕಿಷ್ಟು ಈ ಜನ್ಮಕೆ.

ವಾಣಿಮಹೇಶ್, ಹಾಸನ
