ಬೆಂಗಳೂರು, ಜನವರಿ 14: ನಗರದಲ್ಲಿ ಕಳೆದ ಎರಡು ವಾರಗಳಿಂದ ಚಳಿ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಸೀಸನಲ್ ವೈರಲ್ ಫ್ಲೂ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಜ್ವರ, ಕೆಮ್ಮು, ನೆಗಡಿ, ಶೀತ, ಮೈಕೈ ನೋವು, ಹಸಿವು ಕಡಿಮೆಯಾಗುವುದು ಸೇರಿದಂತೆ SARI (Severe Acute Respiratory Infections) ಮತ್ತು ILI (Influenza-like Illness) ಲಕ್ಷಣಗಳೊಂದಿಗೆ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದು ಹೆಚ್ಚಾಗಿದೆ. ಇದರೊಂದಿಗೆ ತೀವ್ರ ಅತಿಸಾರ (Acute Diarrheal Disease – ADD) ಪ್ರಕರಣಗಳ ಸಂಖ್ಯೆಯಲ್ಲಿಯೂ ಆತಂಕಕಾರಿ ಏರಿಕೆ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ 135 SARI, 35 ILI ಹಾಗೂ 3,327 ADD ಪ್ರಕರಣಗಳು ದಾಖಲಾಗಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾವಹಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 1,79,028 ADD ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಕೇವಲ ಐದು ದಿನಗಳಲ್ಲಿ 3,327 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಕಳೆದ ವರ್ಷ 9,400 ILI ಪ್ರಕರಣಗಳು ಕಂಡುಬಂದಿದ್ದರೆ, ಈ ಬಾರಿ ಕೇವಲ ಐದು ದಿನಗಳಲ್ಲಿ 135 ಪ್ರಕರಣಗಳು ಬೆಳಕಿಗೆ ಬಂದಿವೆ. ಅದೇ ರೀತಿ, ಕಳೆದ ಐದು ದಿನಗಳಲ್ಲಿ 25 SARI ಪ್ರಕರಣಗಳು ಪತ್ತೆಯಾಗಿದ್ದು, ಕಳೆದ ವರ್ಷ ಒಟ್ಟು 4,479 ಪ್ರಕರಣಗಳು ದಾಖಲಾಗಿದ್ದವು.
ಇದನ್ನು ಓದಿ: SBI ATM Charges: ಎಟಿಎಂ ಬಳಿಕ ಐಎಂಪಿಎಸ್ ಶುಲ್ಕವೂ ಹೆಚ್ಚಿಸಿದ ಎಸ್ಬಿಐ
ಚಳಿಗಾಲ ಹಾಗೂ ಬದಲಾಗುತ್ತಿರುವ ಹವಾಮಾನದಿಂದಾಗಿ ಸೀಸನಲ್ ಫ್ಲೂ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು, ಹಿರಿಯ ನಾಗರಿಕರು ಹಾಗೂ ಹೈ ರಿಸ್ಕ್ ರೋಗಿಗಳು ಹೆಚ್ಚಿನ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯವಿದ್ದಲ್ಲಿ ಲಸಿಕೆ ಪಡೆಯುವಂತೆ ಸಲಹೆ ನೀಡಲಾಗಿದೆ. ಕೆಸಿ ಜನರಲ್ ಆಸ್ಪತ್ರೆಯ ವೈದ್ಯ ಡಾ. ಮುರಳೀಧರ್ ಅವರು, ಚಳಿಗಾಲ ಮುಗಿಯುವವರೆಗೂ ಹೊರಗಿನ ಆಹಾರ, ಎಣ್ಣೆಯುಕ್ತ ತಿಂಡಿ ಹಾಗೂ ಅತಿಯಾದ ಸಿಹಿ ಪದಾರ್ಥಗಳನ್ನು ತಪ್ಪಿಸಿ, ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವಂತೆ ತಿಳಿಸಿದ್ದಾರೆ.
ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮವಾಗಿ ಜನರು ಸ್ವಚ್ಛತೆ ಕಾಪಾಡುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವಿಸುವುದು ಮತ್ತು ಕೈಗಳನ್ನು ನಿಯಮಿತವಾಗಿ ತೊಳೆಯುವುದು ಅತ್ಯಂತ ಅಗತ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ. ಚಳಿಯ ತೀವ್ರತೆ ಮುಂದುವರಿದಿರುವುದರಿಂದ ಸಾರ್ವಜನಿಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

[…] […]