ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರು ದಾಖಲಿಸಿದ್ದ ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ, ಪವರ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿಗೆ ಬೆಂಗಳೂರು ಗ್ರಾಮಾಂತರ ಸಿವಿಲ್ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ರವಿಕಾಂತೇಗೌಡ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ಸಲೀಂ ಅವರು ಈ ಆದೇಶ ಹೊರಡಿಸಿದ್ದಾರೆ. 2023ರ ಸೆಪ್ಟೆಂಬರ್ 8ರಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರತಿವಾದಿಯಾಗಿರುವ ‘ಪವರ್ ಸ್ಮಾರ್ಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಂಜೀವ ಶೆಟ್ಟಿ ಅವರು ಉಲ್ಲಂಘಿಸಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಆದೇಶದಂತೆ, ರಾಕೇಶ್ ಶೆಟ್ಟಿ ಅವರು ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಿದ್ದು, ಜೈಲಿನಲ್ಲಿ ಅವರಿಗೆ ಉಂಟಾಗುವ ವೆಚ್ಚವನ್ನು ದೂರುದಾರರಾದ ಬಿ.ಆರ್. ರವಿಕಾಂತೇಗೌಡ ಅವರೇ ಭರಿಸಬೇಕೆಂದು ನ್ಯಾಯಾಲಯ ಸೂಚಿಸಿದೆ. ಈ ಆದೇಶವು ಮಾಧ್ಯಮ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
