ಮಾನವನ ಆತ್ಮೀಯ ಹುಡುಕಾಟ ಸಾವಿರಾರು ವರ್ಷಗಳಿಂದ ಒಂದು ಪ್ರಶ್ನೆಯ ಸುತ್ತಲೇ ತಿರುಗುತ್ತಿದೆ. “ನಾನು ಯಾರು?” ಈ ಪ್ರಶ್ನೆಗೆ ಭಾರತೀಯ ದಾರ್ಶನಿಕ ಪರಂಪರೆ ನೀಡಿದ ಸುಂದರ ಉತ್ತರವೇ — ಸತ್, ಚಿತ್, ಆನಂದ. ಇದು ಕೇವಲ ತತ್ವಶಾಸ್ತ್ರೀಯ ಪದಗಳಲ್ಲ… ಇದು ಜೀವನದ ಅಂತರಂಗವನ್ನು ಸೂಚಿಸುವ ಮೂರು ದೀಪಗಳು.
ಒಂದು ಸರಳ ಉದಾಹರಣೆಯಿಂದ ಇದನ್ನು ಅರ್ಥಮಾಡಿಕೊಳ್ಳಬಹುದು. ವಜ್ರ ಮತ್ತು ಒಂದು ಇರುವೆ — ಇವೆರಡರ ನಡುವೆ ಆಯ್ಕೆ ಬಂದರೆ ಸಾಮಾನ್ಯವಾಗಿ ನಾವು ವಜ್ರವನ್ನು ಆಯ್ಕೆಮಾಡುತ್ತೇವೆ. ಆದರೆ ಆಳವಾಗಿ ನೋಡಿದರೆ ಇರುವೆ ವಜ್ರಕ್ಕಿಂತ ಮಹತ್ವದ್ದು. ವಜ್ರಕ್ಕೆ ಅಸ್ತಿತ್ವ ಇದೆ, ಅದು “ಇದೆ”. ಆದರೆ ಅದಕ್ಕೆ ತನ್ನ ಇರುವಿಕೆಯ ಅರಿವು ಇಲ್ಲ. ಅದು ಕೇವಲ ಒಂದು ವಸ್ತು. ಆದರೆ ಇರುವೆ ಬದುಕಿದೆ, ಅದು ತನ್ನ ಇರುವಿಕೆಯನ್ನು ಅರಿಯುತ್ತದೆ, ಚಲಿಸುತ್ತದೆ, ಪ್ರತಿಕ್ರಿಯಿಸುತ್ತದೆ. ಅಲ್ಲಿ ಅಸ್ತಿತ್ವ ಮಾತ್ರವಲ್ಲ, ಪ್ರಜ್ಞೆಯ ಕಿರಣವೂ ಇದೆ.
ಇಲ್ಲಿ ಮೊದಲ ಪದ “ಸತ್”. ಸತ್ ಎಂದರೆ ಇರುವಿಕೆ, ಅಸ್ತಿತ್ವ. ಈ ಬ್ರಹ್ಮಾಂಡದಲ್ಲಿರುವ ಎಲ್ಲವೂ ಸತ್ನ ಭಾಗ. ಕಲ್ಲು, ಮರ, ನದಿ, ನಕ್ಷತ್ರ….ಇವೆಲ್ಲವೂ ಇರುವಿಕೆಯ ರೂಪಗಳು. ಆದರೆ ಎಲ್ಲಕ್ಕು ತನ್ನ ಇರುವಿಕೆಯ ಅರಿವು ಇರುವುದಿಲ್ಲ.
ಇಲ್ಲಿ ಎರಡನೆಯ ಪದ “ಚಿತ್”. ಚಿತ್ ಎಂದರೆ ಅರಿವು, ಪ್ರಜ್ಞೆ. ಮನುಷ್ಯನಲ್ಲಿ ಈ ಪ್ರಜ್ಞೆ ಅತ್ಯಂತ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅವನು ಕೇವಲ ಬದುಕುವುದಲ್ಲ; “ನಾನು ಇದ್ದೇನೆ” ಎಂಬ ಅರಿವಿನೊಂದಿಗೆ ಬದುಕುತ್ತಾನೆ. ಇದೇ ಅವನ ವಿಶೇಷತೆ.
ಮೂರನೆಯ ಪದ “ಆನಂದ”. ಇದು ಸಂತೋಷಕ್ಕಿಂತ ಆಳವಾದ ಪದ. ಸಂತೋಷ ಸಾಮಾನ್ಯವಾಗಿ ಹೊರಗಿನ ಕಾರಣಗಳಿಂದ ಬರುತ್ತದೆ—ಸಂಪತ್ತು, ಯಶಸ್ಸು, ಸಂಬಂಧಗಳು. ಆದರೆ ಆನಂದವು ಒಳಗಿನಿಂದ ಹುಟ್ಟುವ ಸ್ಥಿತಿ. ಅದು ಅವಲಂಬನೆಯಿಲ್ಲದ ಮೌನ ಸಂತೃಪ್ತಿ.
ಭಾರತೀಯ ಯೋಗದರ್ಶನ ಹೇಳುತ್ತದೆ, ಮನುಷ್ಯನ ನಿಜಸ್ವರೂಪವೇ ಸಚ್ಚಿದಾನಂದ—ಅಸ್ತಿತ್ವ, ಪ್ರಜ್ಞೆ ಮತ್ತು ಆನಂದದ ಸಮನ್ವಯ. ಆದರೆ ನಾವು ಈ ಸತ್ಯವನ್ನು ನೇರವಾಗಿ ಅನುಭವಿಸದೇ ಇರುವುದಕ್ಕೆ ಕಾರಣ ಮನಸ್ಸಿನ ಚಂಚಲತೆ.
ಯೋಗದ ಮಹತ್ವದ ಸೂತ್ರವೊಂದಿದೆ: “ಯೋಗಃ ಚಿತ್ತವೃತ್ತಿ ನಿರೋಧಃ.” ಅಂದರೆ ಮನಸ್ಸಿನ ಚಲನೆಗಳು ಶಾಂತವಾಗುವ ಸ್ಥಿತಿಯೇ ಯೋಗ. ಮನಸ್ಸು ಸದಾ ಅಲೆಮಾಲೆಯಾಗಿರುತ್ತದೆ. ಆಲೋಚನೆಗಳು, ಆಸೆಗಳು, ಭಯಗಳು, ಸ್ಪರ್ಧೆಗಳು — ಇವುಗಳು ಅದರ ಅಲೆಗಳು. ಈ ಅಲೆಗಳು ಶಾಂತವಾಗದಿದ್ದರೆ ಒಳಗಿನ ಆನಂದದ ಸಾಗರ ಕಾಣುವುದಿಲ್ಲ.
ಯೋಗ ಪರಂಪರೆ ಹೇಳುವಂತೆ ಮನಸ್ಸಿನ ಗುಣಗಳು ಮೂರು — ತಾಮಸಿಕ, ರಾಜಸಿಕ ಮತ್ತು ಸಾತ್ವಿಕ.
ತಾಮಸಿಕ ಮನೋವೃತ್ತಿಯಲ್ಲಿ ಅಜ್ಞಾನ, ಹಿಂಸೆ, ಮೋಸ, ಕ್ರೂರತೆ ಪ್ರಬಲವಾಗಿರುತ್ತವೆ. ಈ ಸ್ಥಿತಿಯಲ್ಲಿ ಮನುಷ್ಯ ತನ್ನ ಒಳಗಿನ ಪ್ರಕಾಶವನ್ನು ಅರಿಯಲು ಸಾಧ್ಯವಿಲ್ಲ.
ರಾಜಸಿಕ ಮನೋವೃತ್ತಿಯಲ್ಲಿ ಅಹಂಕಾರ, ಆಸೆ, ಸ್ಪರ್ಧೆ, ಅಶಾಂತಿ ಹೆಚ್ಚು. ಇಲ್ಲಿ ಕೆಲವು ಅರಿವು ಇದ್ದರೂ ಮನಸ್ಸು ನಿರಂತರ ಚಲನೆಯಲ್ಲೇ ಇರುತ್ತದೆ.
ಆದರೆ ಸಾತ್ವಿಕ ಸ್ಥಿತಿಯಲ್ಲಿ ಮನಸ್ಸು ನಿಧಾನವಾಗಿ ಶಾಂತವಾಗುತ್ತದೆ. ಅಲ್ಲಿ ಸ್ಪಷ್ಟತೆ, ಕರುಣೆ, ಸಮತೋಲನ ಹುಟ್ಟುತ್ತವೆ.
ಮನಸ್ಸು ಈ ಶಾಂತ ಸ್ಥಿತಿಗೆ ಬಂದಾಗ ಮನುಷ್ಯ ತನ್ನೊಳಗಿನ ಅಸ್ತಿತ್ವವನ್ನು ಹೊಸ ರೀತಿಯಲ್ಲಿ ಅನುಭವಿಸಲು ಪ್ರಾರಂಭಿಸುತ್ತಾನೆ. ಅವನು ಅರಿಯುವ ಸತ್ಯವೇನು ಎಂದರೆ—ನಾನು ಕೇವಲ ದೇಹವಲ್ಲ, ಕೇವಲ ಮನಸ್ಸಲ್ಲ. ನನ್ನೊಳಗೆ ಒಂದು ಮೌನವಾದ ಸಾಕ್ಷಿ ಇದೆ. ಆ ಸಾಕ್ಷಿಯೇ ಸತ್, ಚಿತ್ ಮತ್ತು ಆನಂದದ ಮೂಲ.
ಅಲ್ಲಿ ಸಂತೋಷಕ್ಕೆ ಕಾರಣ ಬೇಕಾಗುವುದಿಲ್ಲ. ಆನಂದ ಸ್ವತಃ ಹರಿಯುತ್ತದೆ. ಅದಕ್ಕಾಗಿಯೇ ಪ್ರಾಚೀನ ಋಷಿಗಳು ಹೇಳಿದ್ದರು: “ಮನುಷ್ಯನು ಸಚ್ಚಿದಾನಂದ ಸ್ವರೂಪ.” ಅದು ದೂರದಲ್ಲಿರುವ ದೇವತ್ವವಲ್ಲ; ಅದು ನಮ್ಮೊಳಗೆ ಮೌನವಾಗಿ ಕಾದಿರುವ ಒಂದು ಸಾಧ್ಯತೆ.
ಈ ಸತ್ಯವನ್ನು ತಿಳಿಯಲು ದೊಡ್ಡ ಯಾತ್ರೆ ಅಗತ್ಯವಿಲ್ಲ. ಕೆಲವೊಮ್ಮೆ ಮೌನವಾಗಿ ಕುಳಿತುಕೊಳ್ಳುವುದು ಸಾಕು. ಮನಸ್ಸಿನ ಅಲೆಗಳನ್ನು ಗಮನಿಸುತ್ತಾ ಹೋದರೆ, ನಿಧಾನವಾಗಿ ಆ ಅಲೆಗಳ ಕೆಳಗೆ ಇರುವ ಶಾಂತ ಸಾಗರ ಕಾಣುತ್ತದೆ.
ಆ ಸಾಗರವೇ — *ಸತ್, ಚಿತ್ ಮತ್ತು ಆನಂದದ ಅನುಭವ.*
ಅಲ್ಲಿ ಮನುಷ್ಯ ತನ್ನನ್ನು ಕಳೆದುಕೊಳ್ಳುವುದಿಲ್ಲ; ಬದಲಾಗಿ ಮೊದಲ ಬಾರಿಗೆ ತನ್ನನ್ನು ನಿಜವಾಗಿ ಕಂಡುಕೊಳ್ಳುತ್ತಾನೆ.
✍️*ಜಯದೇವ ಪೂಜಾರ*
7676870233
