ಹಾಸನದ ನಾಟ್ಯ ವೈಭವ, ರಂಗಸಿರಿ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಮೂರು ದಿನಗಳ ಕಾಲೇಜು ರಂಗೋತ್ಸವದಲ್ಲಿ, ಎರಡನೇ ದಿನ ಬುಧವಾರ ಬೆಳಿಗ್ಗೆ ಪ್ರದರ್ಶಿತವಾದ ನಾಟಕವೇ “ಲೋಕಾಯುಕ್ತರು ಬರುತ್ತಾರೆ”.
ಪ್ರಸ್ತುತಿ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ, ಹಾಸನ.
ಮೂಲ: ನಿಕೊಲಾಯ್ ಗೊಗೊಲ್. ಕನ್ನಡ ರೂಪಾಂತರ ಹಾಗೂ ಸಂಗೀತ ನಿರ್ದೇಶನ: ಧನಂಜಯ ದಿಯಾನ್.
“ಲೋಕಾಯುಕ್ತರು ಬರುತ್ತಾರೆ” ನಾಟಕವು ವ್ಯಂಗ್ಯ, ಹಾಸ್ಯ ಮತ್ತು ಸಾಮಾಜಿಕ ಸತ್ಯಗಳ ಸಮನ್ವಯದಲ್ಲಿ ಮೂಡಿ ಬಂದ ಶಕ್ತಿಯುತ ರಂಗಕೃತಿ. ಇದು ಮೂಲತಃ “ದಿ ಗವರ್ನ್ಮೆಂಟ್ ಇನ್ಸ್ಪೆಕ್ಟರ್” ಎಂಬ ಪ್ರಸಿದ್ಧ ನಾಟಕದಿಂದ ಪ್ರೇರಿತವಾಗಿದ್ದು, ನಿಕೊಲಾಯ್ ಗೊಗೊಲ್ ಅವರ ಕೃತಿಯ ಆತ್ಮವನ್ನು ಕನ್ನಡ ನೆಲದ ಸನ್ನಿವೇಶಕ್ಕೆ ತಂದು, ಧನಂಜಯ ದಿಯಾನ್ ಅವರು ಹೊಸ ಅರ್ಥಭರಿತ ರೂಪದಲ್ಲಿ ಮರುಸೃಷ್ಟಿಸಿದ್ದಾರೆ.

ಈ ನಾಟಕದ ಕೇಂದ್ರಭೂತ ವಿಷಯ “ಭಯ”. ಆದರೆ ಅದು ಸಾಮಾನ್ಯ ಭಯವಲ್ಲ; ಅದು ಅಧಿಕಾರಿಗಳ ಅಂತರಂಗದಲ್ಲಿರುವ ಅಪರಾಧಭಾವನೆಯ ಭಯ. “ಲೋಕಾಯುಕ್ತರು ಬರುತ್ತಾರೆ” ಎಂಬ ಒಂದು ವದಂತಿಯೇ ಸಂಪೂರ್ಣ ವ್ಯವಸ್ಥೆಯನ್ನು ನಡುಗಿಸುತ್ತದೆ. ಅಧಿಕಾರದ ಅಹಂಕಾರ, ಭ್ರಷ್ಟಾಚಾರ ಮತ್ತು ಸುಳ್ಳಿನ ಮೇಲೆ ಕಟ್ಟಿದ ವ್ಯವಸ್ಥೆಯ ದುರ್ಬಲತೆಯನ್ನು ಇದು ಬಯಲಿಗೆಳೆಯುತ್ತದೆ.
ನಾಟಕದಲ್ಲಿ ಪಟ್ಟಣದ ಮೇಯರ್ ಹಾಗೂ ಇತರ ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಯತ್ನಿಸುತ್ತಾರೆ. ಯಾರೂ ಸತ್ಯವನ್ನು ನೇರವಾಗಿ ಎದುರಿಸಲು ಸಿದ್ಧರಿರುವುದಿಲ್ಲ. ನಿಜವಾದ ಲೋಕಾಯುಕ್ತರು ಬಂದಿರಲಿ ಇಲ್ಲದಿರಲಿ, ಅವರ ಭಯವೇ ಅವರನ್ನು ಒಳಗಿನಿಂದ ಒಡೆದುಹಾಕುತ್ತದೆ—ಇದೇ ನಾಟಕದ ಪ್ರಮುಖ ವ್ಯಂಗ್ಯ.

ಧನಂಜಯ ದಿಯಾನ್ ಅವರ ರೂಪಾಂತರದಲ್ಲಿ ಈ ಕಥೆ ಕೇವಲ ಆಡಳಿತ ವ್ಯವಸ್ಥೆಯ ವಿಮರ್ಶೆಯಾಗಿ ಉಳಿಯದೇ, ಸಮಗ್ರ ಸಮಾಜದ ಪ್ರತಿಬಿಂಬವಾಗುತ್ತದೆ. ಇಲ್ಲಿ “ಲೋಕಾಯುಕ್ತರು” ಎಂದರೆ ಕೇವಲ ಒಂದು ಸಂಸ್ಥೆ ಅಲ್ಲ; ಅದು ನಮ್ಮೊಳಗಿನ ಅಂತಃಕರಣ, ಪ್ರಜ್ಞೆ ಮತ್ತು ಸತ್ಯದ ಕಣ್ಣು.
ಈ ನಾಟಕದ ಮತ್ತೊಂದು ವೈಶಿಷ್ಟ್ಯವೆಂದರೆ, ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವುದು. ಸಾಮಾನ್ಯವಾಗಿ ಪುರುಷ ಪ್ರಧಾನವಾಗಿರುವ ಪಾತ್ರಗಳನ್ನು ಇಲ್ಲಿ ಮಹಿಳಾ ಧ್ವನಿಗಳ ಮೂಲಕ ಹೊಸ ದೃಷ್ಟಿಕೋನದಲ್ಲಿ ಅಭಿವ್ಯಕ್ತಿಸಲಾಗಿದೆ. ಇದರಿಂದ ನಾಟಕಕ್ಕೆ ಹೊಸ ಸಂವೇದನೆ ದೊರಕಿದೆ.

ಶೈಲಿಯಲ್ಲಿ ನಾಟಕವು ಹಾಸ್ಯ ಮತ್ತು ವ್ಯಂಗ್ಯವನ್ನು ಬಳಸಿಕೊಂಡು ಗಂಭೀರ ವಿಷಯಗಳನ್ನು ಹೇಳುತ್ತದೆ. ಸಂಭಾಷಣೆಗಳಲ್ಲಿ ಲಯ, ಪ್ರಾಸ ಮತ್ತು ನಾಟಕೀಯ ತೀವ್ರತೆ ಕಂಡುಬರುತ್ತದೆ. ಕೆಲವೆಡೆ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ನಗಿಸಿದರೂ, ಅದರ ಹಿಂದೆ ಅಡಗಿರುವ ಕಠಿಣ ಸತ್ಯವೂ ಸ್ಪಷ್ಟವಾಗುತ್ತದೆ. ಸಂಗೀತ, ಲಯಬದ್ಧ ಹಾಡುಗಳು ಮತ್ತು ರಂಗರೂಪಗಳು ನಾಟಕಕ್ಕೆ ಜೀವ ತುಂಬಿವೆ. ವಿಶೇಷವಾಗಿ “ಲಂಚಾವತಾರ ನಿಲ್ಲಬೇಕು” ಎಂಬ ಸಂದೇಶದ ಹಾಡುಗಳು ಸಾಮಾಜಿಕ ಘೋಷಣೆಯಂತೆ ಮೂಡಿ ಬರುತ್ತವೆ.
ಕ್ಲೈಮಾಕ್ಸ್ನಲ್ಲಿ ನಾಟಕ ತನ್ನ ಶಿಖರವನ್ನು ತಲುಪುತ್ತದೆ. ಎಲ್ಲಾ ಭ್ರಮೆಗಳು ಒಡೆದುಹೋಗುತ್ತವೆ; ಸುಳ್ಳಿನ ಕಟ್ಟಡ ಕುಸಿಯುತ್ತದೆ. ಕೊನೆಯಲ್ಲಿ ಪ್ರೇಕ್ಷಕರ ಮುಂದೆ ಉಳಿಯುವ ಪ್ರಶ್ನೆ—ನಿಜವಾದ ಲೋಕಾಯುಕ್ತರು ಯಾರು? ಹೊರಗಿನಿಂದ ಬರುವವನಾ, ಅಥವಾ ನಮ್ಮೊಳಗಿನ ನ್ಯಾಯಬುದ್ಧಿಯೇನಾ?

“ಲೋಕಾಯುಕ್ತರು ಬರುತ್ತಾರೆ” ನಾಟಕವು ಕೇವಲ ಮನರಂಜನೆ ನೀಡುವ ಕೃತಿ ಅಲ್ಲ. ಅದು ಜಾಗೃತಿ, ಪ್ರತಿಬಿಂಬ ಮತ್ತು ಎಚ್ಚರಿಕೆ. ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ ಯೋಚಿಸಲು ಪ್ರೇರೇಪಿಸುವ ಶಕ್ತಿ ಇದರಲ್ಲಿದೆ.
ಈ ಸಂದರ್ಭದಲ್ಲಿ ನನ್ನ ಕೆಲವು ಅನುಭವಗಳು ನೆನಪಾಗಿವೆ. ಹಿಂದೊಮ್ಮೆ ಲೋಕಾಯುಕ್ತ ಡಿ.ವೈ.ಎಸ್.ಪಿ ಆಗಿದ್ದ ನನ್ನ ಕವಿ ಮಿತ್ರರೊಂದಿಗೆ ನಡೆದ ಘಟನೆಗಳು, ಅವರ ಕವನ ಸಂಕಲನದ ವಿಮರ್ಶೆ, ಮತ್ತು ನಾನು ಸಾಕ್ಷಿಯಾಗಿ ಹೋದ ರೈಡ್—allವು ಬಾಲ್ಯದಲ್ಲಿ ಓದಿದ ಪತ್ತೇದಾರಿ ಕಥೆಗಳು ಮತ್ತು ಸಿನೆಮಾ ಸಂಭಾಷಣೆಗಳನ್ನು ನೆನಪಿಸಿವೆ.
ಈ ಸಂದರ್ಭ ನನ್ನ ಹನಿಗವನದ ಕೆಲವು ಸಾಲುಗಳು:
ಕವಿಗಳು ಶ್ರೀಮಂತರು
ಹಾಗೆಂದು ಲೋಕಾಯುಕ್ತರು
ದಾಳಿ ಮಾಡಿದರೆ ಸಿಗಬಹುದು
ಶಾಲು, ಕೃತಿಗಳು, ನಿಘಂಟು
ದೊರೆಯಲಾರದು ಗಂಟು
ಏಕೆಂದರೆ ಇವರು ಬರೇ ಭಾವನೆಗಳ
ಹೃದಯ ಶ್ರೀಮಂತರು.
ಹಾಸನ ಜಿಲ್ಲೆಯ ಹೆಮ್ಮೆಯ ನಿರ್ದೇಶಕ ಧನಂಜಯ ದಿಯಾನ್ ಅವರು ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಚಿಂತನೆ ಮತ್ತು ಸಂವೇದನಾಶೀಲ ಅಭಿವ್ಯಕ್ತಿಯಿಂದ ಗುರುತಿಸಿಕೊಂಡಿದ್ದಾರೆ. ನಿನಾಸಂನಲ್ಲಿ ಪಡೆದ ತರಬೇತಿಯ ಆಧಾರದ ಮೇಲೆ, ಅವರು ರಂಗಭೂಮಿಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಮಾಜದ ಒಳನೋಟಗಳನ್ನು ಅನಾವರಣಗೊಳಿಸುವ ಶಕ್ತಿಯುತ ಸಾಧನವಾಗಿ ಬಳಸುತ್ತಿದ್ದಾರೆ.
೪೦ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ನಡೆಸಿ ಅನೇಕ ಯುವ ಪ್ರತಿಭೆಗಳನ್ನು ರೂಪಿಸಿರುವ ಇವರು, “ಅಂಧಯುಗ”, “ತುಘಲಕ್”, “ಕುಸುಮಬಾಲೆ” ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. “ಇನ್ನೂ ಸಾಕು ಬದುಕಿದ್ದು” ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ರಂಗಭೂಮಿ ಇವರ ದೃಷ್ಟಿಯಲ್ಲಿ ಒಂದು ಸಾಧನೆ—ಮನಸ್ಸುಗಳನ್ನು ಸ್ಪರ್ಶಿಸಿ, ಚಿಂತನೆಗೆ ಪ್ರೇರೇಪಿಸುವ ಶಕ್ತಿ. ಇದೇ ರಂಗಸಿರಿ ಸಂಘಟನೆಯ ಕಾಲೇಜು ರಂಗೋತ್ಸವದಲ್ಲಿ ೧೫ ವರ್ಷಗಳ ಹಿಂದೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗೆ ನಿರ್ದೇಶಿಸಿದ “ವಿಶ್ರಾಂತಿ” ನಾಟಕದ ವಿಮರ್ಶೆ ನನ್ನ “ರಂಗಪ್ರಯೋಗ” ಕೃತಿಯಲ್ಲಿ ದಾಖಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಗೊರೂರು ಅನಂತರಾಜು, ಹಾಸನ
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,
೩ನೇ ಕ್ರಾಸ್, ಹಾಸನ – ೫೭೩೨೦೧
