ಕೊರಟಗೆರೆ:- ತಾಲೂಕಿನ ಅರಸಾಪುರ ಗ್ರಾಮದಲ್ಲಿ ಸಾರ್ವಜನಿಕರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ “ಶನಿಪ್ರಭಾವ” ಹರಿಕಥೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಭಕ್ತಿ ಮತ್ತು ಜ್ಞಾನದ ಸುಧೆ ಹರಿಸಿದ ಈ ಕಾರ್ಯಕ್ರಮದಲ್ಲಿ ಶನಿಮಹಾತ್ಮ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿಯನ್ನು ಪಡಿಯಲ್ಲಿ ಕೂರಿಸಿ ಹೂವಿನ ಅಲಂಕಾರವನ್ನು ಮಾಡಿ ಪೂಜಿಸಲಾಯಿತು, ಪೂಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.
ಕಾರ್ಯಕ್ರಮದ ಆರಂಭದಲ್ಲಿ ಗಣಪತಿ ಪೂಜೆ ಹಾಗೂ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರು, “ಇಂದಿನ ಆಧುನಿಕ ಯುಗದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಜನರ ಮನಸ್ಸಿಗೆ ಶಾಂತಿ ನೀಡುವುದಲ್ಲದೆ, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಸಹಕಾರಿ” ಎಂದು ಅಭಿಪ್ರಾಯಪಟ್ಟರು.
ಮನಸೂರೆಗೊಂಡ ಹರಿಕಥೆ
ಪ್ರಸಿದ್ಧ ಹರಿಕಥಾ ದಾಸರಾದ ಮಂಜುನಾಥ್ ಹಾಗೂ ತಬಲಾ-ಹಾರಮೋನಿಯಂ ವಾದ್ಯ ತಂಡ ಶನಿ ಮಹಾತ್ಮನ ಮಹಿಮೆಯನ್ನು ಅತ್ಯಂತ ಮನೋಜ್ಞವಾಗಿ ವಿವರಿಸಿದರು.
ಸೂರ್ಯಪುತ್ರ ಶನಿದೇವನ ಶಕ್ತಿ, ಭಕ್ತರ ಮೇಲಾಗುವ ಪ್ರಭಾವ ಮತ್ತು ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಸಿಗುವ ಫಲದ ಕುರಿತು “ಭಕ್ತಿ ಮತ್ತು ಸತ್ಯದ ಹಾದಿಯಲ್ಲಿ ನಡೆಯುವವರಿಗೆ ಶನಿ ದೇವನು ಯಾವತ್ತೂ ಕೆಡುಕು ಮಾಡುವುದಿಲ್ಲ. ಅಹಂಕಾರವನ್ನು ಮರೆತು ಶರಣಾದಾಗ ಶನಿ ದೃಷ್ಟಿಯು ಅನುಗ್ರಹವಾಗಿ ಬದಲಾಗುತ್ತದೆ” ಎಂದು ಕಥೆಗಾರರು ಬೋಧಿಸಿದರು.
ಕಷ್ಟಕಾಲದಲ್ಲಿ ಧೈರ್ಯಗುಂದದೆ ಧರ್ಮದ ಹಾದಿಯಲ್ಲಿ ಸಾಗಿದರೆ ಶನಿದೇವನು ಒಳಿತನ್ನು ಮಾಡುತ್ತಾನೆ ಎಂಬ ಸಂದೇಶವನ್ನು ಹರಿಕಥೆಯುದ್ದಕ್ಕೂ ಸಾರಲಾಯಿತು.
“ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮ ನಡೆಯುವುದರಿಂದ ಗ್ರಾಮದಲ್ಲಿ ಐಕ್ಯತೆ ಮೂಡುತ್ತದೆ. ಶನಿ ಮಹಾತ್ಮನ ಕಥೆಯನ್ನು ಕೇಳುವುದೇ ಒಂದು ಪುಣ್ಯದ ಕೆಲಸ,” ಎಂದು ಗ್ರಾಮದ ಭಕ್ತರೊಬ್ಬರು ಸಂತಸ ವ್ಯಕ್ತಪಡಿಸಿದರು.
– ಶ್ರೀನಿವಾಸ್ ಕೊರಟಗೆರೆ.
