ಹಾಸನ: ಮಹಿಳೆಯರ ರಾಜಕೀಯ ಸಶಕ್ತಿಕರಣಕ್ಕಾಗಿ ಕೇಂದ್ರ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿರುವುದು ದುರದೃಷ್ಟಕರ ಬೆಳವಣಿಗೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭಾರತದ ನಾರಿಯರಿಗೆ ಶಕ್ತಿ ತುಂಬುವ ಉದ್ದೇಶದಿಂದ ಈ ಮಸೂದೆ ತರಲಾಗಿತ್ತು. ಆದರೆ ರಾಜಕೀಯ ಮೇಲಾಟದ ನಡುವೆ ಇಂಡಿ ಒಕ್ಕೂಟ ಮಸೂದೆಯನ್ನು ಸೋಲಿಸುವ ಮೂಲಕ ಮಹಿಳೆಯರಿಗೆ ಅಪಮಾನ ಮಾಡಿದೆ,” ಎಂದು ಆರೋಪಿಸಿದರು.
ಎನ್ಡಿಎಗೆ ಮಹಿಳೆಯರ ಬಗ್ಗೆ ದಿಡೀರ್ ಪ್ರೀತಿ ಬಂದಿಲ್ಲ. ಮಹಿಳೆಯರಿಗೆ ಪ್ರಾಧಾನ್ಯತೆ ನೀಡುವುದು ಬಿಜೆಪಿ ಪಕ್ಷದ ಮೂಲ ಅಜೆಂಡಾ ಎಂದು ಹೇಳಿದ ಅವರು, ಹಂತಹಂತವಾಗಿ ಮಹಿಳಾ ಸಶಕ್ತಿಕರಣದ ದಿಕ್ಕಿನಲ್ಲಿ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮನೆಗೆ ತೆರಳಿ ಮಸೂದೆಯ ಮಹತ್ವ ತಿಳಿಸಲಾಗುವುದು. ಇದರ ಮೂಲಕ ವಿಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡೆ ಸುಲೋಚನಾ ಭಟ್, ಏಪ್ರಿಲ್ 16ರಂದು ಕೇಂದ್ರ ಸರ್ಕಾರ ‘ನಾರಿ ವಂದನ್’ ಮಸೂದೆ ಮಂಡಿಸಿದೆ. ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದರೂ, ಕಾಂಗ್ರೆಸ್ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದು ನೋವಿನ ಸಂಗತಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹಾಗೂ ಮುಖಂಡರಾದ ಗಿರೀಶ್, ಸುಲೋಚನಾ, ನೇತ್ರಾವತಿ, ವೇದಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
