ತುಮಕೂರು : ನಗರದ 31ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ 1ನೇ ಮುಖ್ಯರಸ್ತೆಯ 3ನೇ ಅಡ್ಡರಸ್ತೆಯಲ್ಲಿರುವ ಪಾರ್ಕ್ (ಉದ್ಯಾನವನ) ಜಾಗದಲ್ಲಿ ‘ನಮ್ಮ ಕ್ಲಿನಿಕ್’ ಆಸ್ಪತ್ರೆ ನಿರ್ಮಿಸುತ್ತಿರುವುದಕ್ಕೆ ಸ್ಥಳೀಯ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ಇದು ಜಯನಗರ ಪೋಲೀಸ್ ಠಾಣೆಗೆ ಸಾರ್ವಜನಿಕರು ನೀಡಿದ್ದರು ಆದರೆ ಈಗ ಪಾಲಿಕೆ ನಮ್ಮ ಕ್ಲೀನಿಕ್ ಆರಂಭಿಸಲು ಹೊರಟಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ,ಈ ಸಂಬಂಧ ಬಡಾವಣೆಯ ನಿವಾಸಿಗಳು ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಅವರನ್ನು ಭೇಟಿಯಾಗಿ, ಆಸ್ಪತ್ರೆ ನಿರ್ಮಾಣಕ್ಕೆ ತಡೆ ಹಿಡಿಯುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.
ಪಾರ್ಕ್ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಜಾಗದಲ್ಲಿ ಆಸ್ಪತ್ರೆ ಸ್ಥಾಪನೆಗೆ ಅನುವು ಮಾಡಿಕೊಟ್ಟಿರುವುದು ಸುತ್ತಮುತ್ತಲಿನ ನಿವಾಸಿಗಳಿಗೆ ತೀವ್ರ ಅನಾನುಕೂಲವನ್ನು ಉಂಟುಮಾಡುತ್ತದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸಿರು ವಾತಾವರಣ ಮತ್ತು ಸಾರ್ವಜನಿಕರ ವಾಯುವಿಹಾರಕ್ಕೆ ಪಾರ್ಕ್ ಅತ್ಯಗತ್ಯವಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಆಸ್ಪತ್ರೆ ನಿರ್ಮಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿ ಆಸ್ಪತ್ರೆ ನಿರ್ಮಿಸಲು ಆಗ್ರಹ:
“ಆಸ್ಪತ್ರೆ ಅಥವಾ ಕ್ಲಿನಿಕ್ಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತಾಗಲು ಅವುಗಳನ್ನು ಮುಖ್ಯ ರಸ್ತೆಯ ಬದಿಯಲ್ಲಿ ನಿರ್ಮಿಸಬೇಕು. ಶೆಟ್ಟಿಹಳ್ಳಿ ಮುಖ್ಯರಸ್ತೆಯ ಹಲವು ಕಡೆ ಸರ್ಕಾರಿ ಸಿಎ ನಿವೇಶನಗಳಿದ್ದು ಅವುಗಳಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಈ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೂ ಸಹ ಮನವಿ ಸಲ್ಲಿಸಿದ್ದರು,ವಸತಿ ಪ್ರದೇಶದ ಒಳಗಿರುವ ಪಾರ್ಕ್ ಜಾಗದಲ್ಲಿ ಕ್ಲಿನಿಕ್ ಮಾಡಿದರೆ ರೋಗಿಗಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಈ ಜಾಗದಲ್ಲಿ ಮೊದಲಿನಂತೆ ಉದ್ಯಾನವನನ್ನು ಪಾಲಿಕೆ ವತಿಯಿಂದ ನಿರ್ಮಿಸಿಕೊಡಬೇಕು,” ಎಂದು ನಾಗರಿಕರು ಶಾಸಕರಲ್ಲಿ ಮನವಿ ಮಾಡಿದರು.
ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆದ ಆರ್.ಎಸ್.ವೀರಪ್ಪದೇವರು,ಉಪಾಧ್ಯಕ್ಷರಾದ ಬಿ.ವಿ.ದ್ವಾರಕಾನಾಥ್,ಮುಖಂಡರುಗಳಾದ ಶಂಕರಪ್ಪ,ಪಿ.ಕೆ.ರಾಘವೇಂದ್ರ, ಶಾಂತರಾಜು ಹಾಗೂ ಬಡಾವಣೆಯ ನಿವಾಸಿಗಳು,ಮಹಿಳೆಯರು ಉಪಸ್ಥಿತರಿದ್ದರು.
