ಅರಕಲಗೂಡು : ತಾಲೂಕಿನಲ್ಲಿ ಮಾನ್ಯ ಶಾಸಕರ ಪರಿಕಲ್ಪನೆ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ 19 ಮಕ್ಕಳ ಮನೆಗಳಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
“ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಾಮರಸ್ಯವನ್ನು ಸಾಧಿಸುವ ಜೀವನಶೈಲಿಯಾಗಿದೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಕ್ಕಳ ಮನೆಯ ಪುಟಾಣಿ ಮಕ್ಕಳು ಶುಭ್ರವಾದ ಬಿಳಿ ವಸ್ತ್ರಗಳನ್ನು ಧರಿಸಿ ಉತ್ಸಾಹದಿಂದ ಶಾಲೆಗೆ ಆಗಮಿಸಿದ್ದರು. ಯೋಗ ತಜ್ಞರಾದ ಎಸ್.ಜಿ. ಪಾಟೀಲ್ ಅವರು ಬೆಂಗಳೂರಿನಿಂದ ಗೂಗಲ್ ಮೀಟ್ ಮೂಲಕ ಯೋಗಾಭ್ಯಾಸದ ಮಾರ್ಗದರ್ಶನ ನೀಡಿದರು. ಶಿಕ್ಷಕಿಯರು ಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಪ್ರಾಯೋಗಿಕವಾಗಿ ಮಾಡಿಸಿ ಯೋಗದ ಮಹತ್ವವನ್ನು ತಿಳಿಸಿಕೊಟ್ಟರು.

ಸುಮಾರು 30 ನಿಮಿಷಗಳ ಕಾಲ ನಡೆದ ಯೋಗಾಭ್ಯಾಸದಲ್ಲಿ ಮಕ್ಕಳು ವಿವಿಧ ಆಸನಗಳು, ಪ್ರಾಣಾಯಾಮ ಹಾಗೂ ಧ್ಯಾನ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಯೋಗದ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಂಡ ಮಕ್ಕಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗೂಗಲ್ ಮೀಟ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಅವರು ಮಕ್ಕಳಿಗೆ ಯೋಗದ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿ, ಈ ವಿನೂತನ ಕಾರ್ಯಕ್ರಮದ ರೂವಾರಿಗಳಾದ ಡಾ. ಅಶೋಕ್ ಹನ್ಯಾಳ್ ಅವರ ವಿಶೇಷ ಕಾಳಜಿ ಹಾಗೂ ಶ್ರಮವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ 19 ಶಾಲೆಗಳ ಮುಖ್ಯೋಪಾಧ್ಯಾಯರು, ಮಕ್ಕಳ ಮನೆ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
19 ಮಕ್ಕಳ ಮನೆಗಳಲ್ಲೂ ಅಂತರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮ, ಶಿಸ್ತು ಹಾಗೂ ಉತ್ಸಾಹದಿಂದ ಆಚರಿಸಲಾಗಿದ್ದು, ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಯೋಗದ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
