ಹಾಸನ, ಜೂ. 21: ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮ ಹಾಗೂ ಶಿಸ್ತಿನ ವಾತಾವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಅತಿಥಿಗಳು ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ವಾಣಿವಿಲಾಸದ ಆಂಗ್ಲ ಉಪನ್ಯಾಸಕ ಶ್ರೀ ಗೊರೂರು ಶಿವೇಶ್ ಮಾತನಾಡಿ, ಯೋಗವು ಮೈ ಮತ್ತು ಮನಸ್ಸನ್ನು ಒಗ್ಗೂಡಿಸುವ ಅತ್ಯುತ್ತಮ ಸಾಧನವಾಗಿದೆ ಎಂದು ತಿಳಿಸಿದರು.
“ಮನಸ್ಸನ್ನು ಏಕಾಗ್ರ ಸ್ಥಿತಿಗೆ ತರುವುದೇ ಯೋಗ. ಯೋಗಾಭ್ಯಾಸದಿಂದ ವ್ಯಕ್ತಿ ತನ್ನ ಕಾರ್ಯಗಳಲ್ಲಿ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬಹುದು. ಯೋಗವು ಕೇವಲ ವ್ಯಾಯಾಮವಲ್ಲ, ಅದು ಜೀವನಶೈಲಿಯಾಗಿದೆ” ಎಂದು ಹೇಳುತ್ತಾ ಯೋಗದ ಪಿತಾಮಹ ಪತಂಜಲಿ ಮಹಾಮುನಿಗಳನ್ನು ಸ್ಮರಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಹಾಸನ ಜಿಲ್ಲಾ ಯೋಗ ಶಿಕ್ಷಣ ತರಬೇತಿದಾರರಾದ ಶ್ರೀ ನಿರಂಜನ್ ರಾಜ್ ಮಾತನಾಡಿ, ಯೋಗವು ಮನುಷ್ಯನ ನರಗಳು, ಸ್ನಾಯುಗಳು, ಉಸಿರಾಟ ವ್ಯವಸ್ಥೆ ಹಾಗೂ ಬುದ್ಧಿಶಕ್ತಿಯ ಸಮನ್ವಯವನ್ನು ಸಾಧಿಸುವ ವಿಜ್ಞಾನವಾಗಿದೆ ಎಂದು ಹೇಳಿದರು.
“ಯೋಗವು ದೇಹದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದ್ದು, ಆರೋಗ್ಯಕರ ಜೀವನವನ್ನು ರೂಪಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಳ್ಳುವುದು ಅಗತ್ಯ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಕೆ.ಎಂ. ನಾಗರಾಜು ಹಾಗೂ ಪ್ರಾಂಶುಪಾಲೆ ಶ್ರೀಮತಿ ಕ್ರಿಸ್ಟೀನಾ ಎಸ್. ಉಪಸ್ಥಿತರಿದ್ದರು.
ಶಾಲೆಯ ಹಿಂದಿ ವಿಭಾಗದ ಹಿರಿಯ ಶಿಕ್ಷಕರು ಹಾಗೂ ರಾಷ್ಟ್ರಮಟ್ಟದ ಯೋಗ ಪ್ರಶಸ್ತಿ ವಿಜೇತರಾದ ಶ್ರೀ ಪಾಂಡು ಎ. ಅವರ ಮಾರ್ಗದರ್ಶನದಲ್ಲಿ ಶಾಲೆಯ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಸಾಮೂಹಿಕವಾಗಿ ಪ್ರದರ್ಶಿಸುವ ಮೂಲಕ ಯೋಗ ದಿನಾಚರಣೆಗೆ ವಿಶೇಷ ಮೆರುಗು ತಂದರು. ವಿದ್ಯಾರ್ಥಿಗಳ ಶಿಸ್ತುಬದ್ಧ ಯೋಗ ಪ್ರದರ್ಶನವು ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗದ ಮಹತ್ವವನ್ನು ಅರಿತುಕೊಂಡರು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
