ರಾಮನಾಥಪುರ, ಜೂನ್ 29: ರಾಮನಾಥಪುರ ಸಮೀಪದ ಬೆಟ್ಟದಪುರ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠ ಹಾಗೂ ಕನ್ನಡ ಮಠದಲ್ಲಿ ಜೂನ್ 30ರಂದು ಕನ್ನಡ ಮಠದ 217ನೇ ಸಂಸ್ಥಾಪನಾ ವರ್ಷಾಚರಣೆ, ಪರಮಪೂಜ್ಯ ಶ್ರೀ ಚಿಕ್ಕವೀರ ದೇಶಿಕೇಂದ್ರ ಮಹಾಸ್ವಾಮೀಜಿಗಳ 97ನೇ ಗಣಾರಾಧನೆ, ಶ್ರೀ ಚನ್ನವೀರ ದೇಶಿಕೇಂದ್ರ ಮಹಾಸ್ವಾಮೀಜಿಯವರ 45ನೇ ವರ್ಷದ ಗಣಾರಾಧನಾ ಮಹೋತ್ಸವ, ಶಿವಾನುಭವ ಗೋಷ್ಠಿ, ನುಡಿ ನೈವೇದ್ಯ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀಮಠದ ಶ್ರೀ ಚನ್ನಬಸವದೇಶಿಕೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಬೆಳಿಗ್ಗೆ 7.30ಕ್ಕೆ ಷಟ್ಸ್ಥಳ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಧ್ವಜಾರೋಹಣವನ್ನು ಲಾಲನಹಳ್ಳಿ ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠದ ಶ್ರೀ ಜಯದೇವಿ ತಾಯಿ ನೆರವೇರಿಸಲಿದ್ದಾರೆ ಎಂದು ಹಾಸನ ಜಿಲ್ಲಾ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಳಿಗ್ಗೆ 10.30ಕ್ಕೆ ನಡೆಯುವ ಶಿವಾನುಭವ ಗೋಷ್ಠಿಯಲ್ಲಿ ಬೆಟ್ಟದಪುರ ಸಲೀಲಾಖ್ಯ ಮಠ ಹಾಗೂ ಕನ್ನಡ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮಾಗಡಿ ತಾಲೂಕು ರುದ್ರಮುನೀಶ್ವರ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿ ನುಡಿ ನೈವೇದ್ಯ ನೀಡಲಿದ್ದು, ಸರಗೂರು ತಾಲೂಕು ಪಡವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಸಮಾಜ ಯುವಚೇತನ ಕುರಿತು ಆಶೀರ್ವಚನ ನೀಡಲಿದ್ದಾರೆ. ಪಿರಿಯಾಪಟ್ಟಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ.
ಕೊಡಗು ಜಿಲ್ಲಾ ಮಹಾಸಭಾ ಅಧ್ಯಕ್ಷ ಎಚ್.ಯು. ಶಿವಪ್ಪ, ಪಿರಿಯಾಪಟ್ಟಣ ತಾಲೂಕು ಮಹಾಸಭಾ ಅಧ್ಯಕ್ಷ ಎಚ್.ಜಿ. ಪರಮೇಶ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಸಿ.ವಿ.ಡಿ.ಎಸ್. ವಿದ್ಯಾಸಂಸ್ಥೆಗಳ 35ನೇ ವರ್ಷದ ಆಚರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರವೂ ನಡೆಯಲಿದೆ
ಸಲೀಲಾಖ್ಯ ಮಠದ ಪರಂಪರೆ
ಸ್ವತಂತ್ರ ಸಲೀಲಾಖ್ಯ ಮಠವು 15ನೇ ಶತಮಾನದಲ್ಲಿ ಶ್ರೀ ಗೋಸಲ ಸಿದ್ಧಲಿಂಗೇಶ್ವರ ಸ್ವಾಮೀಜಿಗಳಿಂದ ಸ್ಥಾಪನೆಯಾಗಿದ್ದು, ಬೆಟ್ಟದಪುರದಲ್ಲಿರುವ ಅವರ ತೊರುಗದ್ದಿಗೆ ಇಂದಿಗೂ ಭಕ್ತರ ಆರಾಧನಾ ಕೇಂದ್ರವಾಗಿದೆ. ಕನ್ನಡ ಮಠದ ಆಡಳಿತವನ್ನು ಸಲೀಲಾಖ್ಯ ಮಠದ ಹಿಂದಿನ ನಾಲ್ವರು ಪೂಜ್ಯ ಸ್ವಾಮೀಜಿಗಳು ನಿರ್ವಹಿಸಿರುವ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದು ಶ್ರೀ ಚನ್ನಬಸವದೇಶಿಕೇಂದ್ರ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.
ಎಂ.ಎನ್.ಕುಮಾರಸ್ವಾಮಿ.
