ಬೆಂಗಳೂರು, ಜೂನ್ 29: ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಸಂಘಟಿತ ಮೋಟಾರ್ ವಿಮಾ ವಂಚನೆ ಜಾಲವನ್ನು ಪತ್ತೆಹಚ್ಚಿರುವುದಾಗಿ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಒಂಬತ್ತು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕುಣಿಗಲ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ವಿಧಿಗಳ ಅಡಿಯಲ್ಲಿ ವಂಚನೆ, ಸುಳ್ಳು ವ್ಯಕ್ತಿತ್ವ ಧಾರಣೆ, ದಾಖಲೆ ನಕಲಿ ಸೃಷ್ಟಿ ಹಾಗೂ ಕ್ರಿಮಿನಲ್ ಸಂಚು ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಹೇಗೆ ನಡೆದಿದೆ?
ಐಸಿಐಸಿಐ ಲೊಂಬಾರ್ಡ್ ನಡೆಸಿದ ತನಿಖೆಯಲ್ಲಿ ವಾಹನ ಅಪಘಾತ ಪರಿಹಾರ (MVC) ಪ್ರಕರಣಗಳಲ್ಲಿ ಕೃತಕ ಅಪಘಾತಗಳನ್ನು ಸೃಷ್ಟಿಸುವುದು, ವಿಮೆ ಹೊಂದಿರುವ ವಾಹನಗಳನ್ನು ಉದ್ದೇಶಪೂರ್ವಕವಾಗಿ ದಾವೆಗಳಲ್ಲಿ ಸೇರಿಸುವುದು ಹಾಗೂ ಒಂದೇ ವ್ಯಕ್ತಿಗಳನ್ನು ವಿವಿಧ ಪ್ರಕರಣಗಳಲ್ಲಿ ಸಾಕ್ಷಿದಾರರು, ದಾವೆದಾರರು ಮತ್ತು ಆರೋಪಿಗಳಾಗಿ ಬಳಸಿರುವ ಆರೋಪಗಳು ಬೆಳಕಿಗೆ ಬಂದಿವೆ.
ಕಂಪನಿಯ ತನಿಖೆಯು ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಮೋಟಾರ್ ವಾಹನ ಪರಿಹಾರ ಪ್ರಕರಣಗಳನ್ನು ಒಳಗೊಂಡಿತ್ತು. ಇವುಗಳಲ್ಲಿ ಎರಡು ಗಾಯದ ಪ್ರಕರಣಗಳು ಹಾಗೂ ಒಂದು ಮರಣ ಪರಿಹಾರ ಪ್ರಕರಣ ಸೇರಿದ್ದು, ಕ್ರಮವಾಗಿ ₹10 ಲಕ್ಷ, ₹20 ಲಕ್ಷ ಮತ್ತು ₹1 ಕೋಟಿ ಪರಿಹಾರವನ್ನು ಕೋರಲಾಗಿತ್ತು.
ತನಿಖೆಯಲ್ಲಿ ಪತ್ತೆಯಾದ ಅಂಶಗಳು
ಕಂಪನಿಯ ಮಾಹಿತಿ ವಿಶ್ಲೇಷಣೆ, ಸ್ಥಳ ಪರಿಶೀಲನೆ ಮತ್ತು ದಾಖಲಾತಿಗಳ ಪರಿಶೀಲನೆಯಲ್ಲಿ ಅಪಘಾತಗಳಲ್ಲಿ ಭಾಗಿಯಾಗದ ವಿಮೆ ಹೊಂದಿದ ವಾಹನಗಳನ್ನು ದಾವೆಗಳಲ್ಲಿ ಬಳಸಿರುವುದು, ಸ್ಥಳದಲ್ಲೇ ಇರದ ವ್ಯಕ್ತಿಗಳನ್ನು ಸಾಕ್ಷಿದಾರರನ್ನಾಗಿ ತೋರಿಸಿರುವುದು ಹಾಗೂ ಕೆಲವು ವ್ಯಕ್ತಿಗಳ ನಡುವಿನ ಸಂಯೋಜಿತ ಚಟುವಟಿಕೆಗಳಿರುವುದು ಬೆಳಕಿಗೆ ಬಂದಿದೆ ಎಂದು ಕಂಪನಿ ಹೇಳಿದೆ.
ಇದಕ್ಕೆ ಸಂಬಂಧಿಸಿದ ಆಡಿಯೋ ಹಾಗೂ ವಿಡಿಯೊ ಸಾಕ್ಷ್ಯಗಳನ್ನೂ ಕಂಪನಿ ಸಂಗ್ರಹಿಸಿದ್ದು, ಹಣಕಾಸಿನ ಲಾಭಕ್ಕಾಗಿ ವಾಹನಗಳನ್ನು ಒದಗಿಸುವುದು ಮತ್ತು ಸಾಕ್ಷಿದಾರರಾಗಿ ಕಾರ್ಯನಿರ್ವಹಿಸುವ ಬಗ್ಗೆ ಆರೋಪಿತ ಒಪ್ಪಿಗೆ ಹೇಳಿಕೆಗಳು ದಾಖಲಾಗಿವೆ ಎಂದು ತಿಳಿಸಿದೆ.
ಮೂರು ಪ್ರಕರಣಗಳು ಹಿಂತೆಗೆತ
ತನಿಖೆಯ ವಿವರಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದ ಬಳಿಕ 2025ರ ಅಕ್ಟೋಬರ್ನಲ್ಲಿ ಬಾಕಿ ಇದ್ದ ಮೂರು ಮೋಟಾರ್ ವಾಹನ ಪರಿಹಾರ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಸುಮಾರು ಎರಡು ವರ್ಷಗಳಿಂದ ವಿಚಾರಣೆಯಲ್ಲಿದ್ದ ಒಂದು ಪ್ರಕರಣವನ್ನು ಕೊನೆಯ ಹಂತದಲ್ಲಿ ಹಿಂತೆಗೆದುಕೊಂಡಿದ್ದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಅರ್ಜಿದಾರರ ಪರ ವಕೀಲರ ಮೇಲೆ ಜುಲ್ಮಾನೆ ವಿಧಿಸಿದೆ.
ಕಂಪನಿಯ ಪ್ರತಿಕ್ರಿಯೆ
ಐಸಿಐಸಿಐ ಲೊಂಬಾರ್ಡ್ನ ಮೋಟಾರ್ ಕ್ಲೈಮ್ಸ್ ವಿಭಾಗದ ಮುಖ್ಯಸ್ಥ ನಜೀಮ್ ಖಾನ್ ಮಾತನಾಡಿ, “ಮೋಟಾರ್ ಥರ್ಡ್ ಪಾರ್ಟಿ ಕ್ಲೈಮ್ಗಳಲ್ಲಿ ನಡೆಯುವ ವಿಮಾ ವಂಚನೆಗಳು ವಿಮಾ ವ್ಯವಸ್ಥೆ ಹಾಗೂ ನ್ಯಾಯಾಂಗದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಮಾಹಿತಿ ವಿಶ್ಲೇಷಣೆ, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆಯ ಮೂಲಕ ಇಂತಹ ವಂಚನೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗಿದೆ. ವಿಮಾ ಸಂಸ್ಥೆಗಳು, ನ್ಯಾಯಾಲಯಗಳು ಹಾಗೂ ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಮನ್ವಯ ಇಂತಹ ವಂಚನೆಗಳನ್ನು ತಡೆಯಲು ಅತ್ಯಗತ್ಯ” ಎಂದು ತಿಳಿಸಿದ್ದಾರೆ.
ಸಂಘಟಿತ ವಿಮಾ ವಂಚನೆಗಳನ್ನು ತಡೆಯಲು ಹಾಗೂ ನಡೆಯುತ್ತಿರುವ ತನಿಖೆಗೆ ಅಗತ್ಯ ಸಹಕಾರ ನೀಡಲು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಮುಂದುವರಿದು ಕಾರ್ಯನಿರ್ವಹಿಸುವುದಾಗಿ ಕಂಪನಿ ತಿಳಿಸಿದೆ.
