ಚನ್ನರಾಯಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಿರುವ ಸಂವಿಧಾನ ಶಿಲ್ಪಿ, ವಿಶ್ವನಾಯಕ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲು ತಾಲೂಕು ಆಡಳಿತ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಅರಬೆತ್ತಲೆ ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಕಲೆ ಮತ್ತು ಸಾಹಿತ್ಯ ಪ್ರಾಕೋಷ್ಟದ ಜಿಲ್ಲಾ ಸಂಚಾಲಕ ನಂಜುಂಡ ಮೈಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪ್ರತಿಮೆ ಸ್ಥಾಪನೆಯಾಗಿ ಸುಮಾರು 10 ತಿಂಗಳು ಕಳೆದಿದ್ದರೂ ಲೋಕಾರ್ಪಣೆ ಮಾಡದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎರಡು ತಿಂಗಳ ಹಿಂದೆ ಇದೇ ಪ್ರತಿಮೆ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಗೆ ಸೂಕ್ತ ಸ್ಪಂದನೆ ದೊರೆಯದೆ, ಪ್ರತಿಮೆ ಲೋಕಾರ್ಪಣೆ ವಿಚಾರದಲ್ಲಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಂಜುಂಡ ಮೈಮ್, ಪ್ರತಿಮೆ ಲೋಕಾರ್ಪಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸೆಪ್ಟೆಂಬರ್ 20ರೊಳಗೆ ಪ್ರತಿಮೆ ಲೋಕಾರ್ಪಣೆ ಮಾಡದಿದ್ದರೆ ತಾಲೂಕು ಕಚೇರಿ ಎದುರು ‘ಲಬೋ ಲಬೋ’ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರವೂ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ರಾಜಕೀಯ ಮುಖಂಡರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದರು.
ಪ್ರತಿಭಟನಾಕಾರರು ಮಿನಿ ವಿಧಾನಸೌಧದ ಆವರಣದಲ್ಲಿರುವ ಡಾ. ಅಂಬೇಡ್ಕರ್ ಅವರ ಪ್ರತಿಮೆ ಎದುರು ಅರಬೆತ್ತಲೆ ಚಳುವಳಿ ನಡೆಸಿದ ಬಳಿಕ ತಾಲೂಕು ಕಚೇರಿ ಮುಂಭಾಗ ಮೆರವಣಿಗೆ ನಡೆಸಿ ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಅವರು ವಿಷಯವನ್ನು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದು, ಶೀಘ್ರವೇ ಪ್ರತಿಮೆ ಲೋಕಾರ್ಪಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶ್ರವಣಬೆಳಗೊಳ ಮಂಡಲ ಅಧ್ಯಕ್ಷ ಪರಮ ಗಂಗಾಧರ್, ಪ್ರಧಾನ ಕಾರ್ಯದರ್ಶಿಗಳಾದ ಗನ್ನಿ ವಿಶ್ವನಾಥ್ ಹಾಗೂ ಪ್ರಶಾಂತ್, ಬಿಜೆಪಿ ಮಾಜಿ ಅಧ್ಯಕ್ಷರಾದ ರಂಗೇಗೌಡ ಮತ್ತು ಚನ್ನಕೇಶವ, ಉಪಾಧ್ಯಕ್ಷ ಅಶೋಕ್ ಶೆಟ್ಟಿಹಳ್ಳಿ, ಮುಖಂಡರಾದ ಸತೀಶ್ ಗೌಡಗೆರೆ, ಚಿಕ್ಕಬೆಳತಿ ಚನ್ನಕೇಶವ, ಎಲ್ಐಸಿ ಕುಮಾರ್, ಮಣಿಕಂಠ, ಸಿ.ಜಿ. ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಐ ಕೆ ಮಂಜುನಾಥ್
