ರಾಮನಾಥಪುರ, ಸೆ.30: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರ ಪಟ್ಟಣದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗೌರಿ ಗಣಪತಿ ಮಹೋತ್ಸವದ ಅಂಗವಾಗಿ ದಕ್ಷಿಣ ಕಾಶಿ ಯುವಕರ ಬಳಗದ ವತಿಯಿಂದ ವಿಶೇಷ ಪೂಜಾ ಮಹೋತ್ಸವ ಹಾಗೂ ಬೃಹತ್ ಅನ್ನದಾಸೋಹ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಅನ್ನದಾಸೋಹದಲ್ಲಿ ಭಾಗವಹಿಸಿದರು.

ಗೌರಿ ಹಬ್ಬದ ಅಂಗವಾಗಿ ಶ್ರೀ ಗೌರಿ ಗಣಪತಿ ಮೂರ್ತಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ದಕ್ಷಿಣ ಕಾಶಿ ಯುವಕರ ಬಳಗವು ಹಲವು ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಮಾಜಮುಖಿ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಾ ಬಂದಿದೆ. ಪುರುಷರು, ಮಹಿಳೆಯರು ಹಾಗೂ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದೊಂದಿಗೆ ಬೆರೆಯುವ ಕಾರ್ಯವನ್ನು ಸಮಿತಿ ಮಾಡಿಕೊಂಡು ಬರುತ್ತಿದೆ.

ಗೌರಿ ಗಣಪತಿ ಮಹೋತ್ಸವದ ಅಂಗವಾಗಿ ನಡೆದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
– ಕುಮಾರಸ್ವಾಮಿ ಎಂ.ಎನ್.
