ಒಮ್ಮೆ ಒಂದು ಬೃಹತ್ ವೇದಿಕೆ ನಿರ್ಮಾಣಗೊಂಡಿದೆ, ಎಲ್ಲೆಲ್ಲಿ ನೋಡಿದರು ಜನರಿಂದ ತುಂಬಿದೆ ಹಾಗೂ ವೇದಿಕೆಯ ಮೇಲೆ ಅಂತರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರು, ವಾಸ್ತುಶಿಲ್ಪ ಶಾಸ್ತ್ರ ಜ್ಞರು ಮತ್ತು ತೀರ್ಪುಗಾರರು ಹಾಗು ಇತರರು ಉಪಸ್ಥಿತರಿದ್ದರು. ಆ ವೇದಿಕೆಯ ಉದ್ದೇಶ ಪ್ರಪಂಚದಲ್ಲಿ ಇರುವ ಅದ್ಭುತಗಳನ್ನು ಅಂಕಗಳ ಆಧಾರದ ಮೇಲೆ 7 ಹೆಸರುಗಳ ಪಟ್ಟಿಯನ್ನು ಮಾಡಲೆಂದು. ಕಾರ್ಯಕ್ರಮದಲ್ಲಿ ಪೂರ್ವನಿಯೋಜಿಸಿದಂತೆ ಚರ್ಚೆ, ವಾದ, ವಿಷಯ ಮತ್ತು ತರ್ಕಗಳ ಮೇರೆಗೆ ತೀರ್ಪುಗಾರರು ಪ್ರಪಂಚದ ಅದ್ಭುತಗಳ ಹೆಸರುಗಳನ್ನು ಹೇಳ ತೊಡಗಿದರು. ಇದನ್ನು ದೂರದರ್ಶನದ ಮುಂದೆ ಕೂತು ವೀಕ್ಷಿಸುತ್ತಿದ್ದ ನನಗೆ ಅವರುಗಳು ಹೆಸರಿಸಿದ ಅದ್ಭುತಗಳು ಅದ್ಭುತವಾಗಿ ಕಾಣಲಿಲ್ಲ.
ಆ ಅದ್ಭುತಗಳೆಲ್ಲವೂ ಅದ್ಭುತ ಕೆತ್ತನೆ, ಸುಂದರ ಉದ್ಯಾನವನ, ಶಿಲ್ಪಿಗಳ ಕಲ್ಪನೆಗಳ ಕಟ್ಟಡಗಳು, ವಿನೂತನ ವಸ್ತುಗಳು ಕೂಡಿದ್ದರಿಂದ ನನಗೆ ಅವುಗಳು ಅದ್ಭುತವೆನಿಸಲಿಲ್ಲ. ಕಾರಣವಿಷ್ಟೆ. ಅವುಗಳ ಇತಿಹಾಸ ತಿರುವಿದಾಗ ಇದ್ದ ಸಾಮ್ರಾಟರ ಮತ್ತು ಚಕ್ರಾಧಿಪತ್ಯಗಳ ಅಹಂ ಭಾವನೆ, ಸುಂದರ ಕಟ್ಟಡ (ತಾಜ್ಮಹಲ್) ಕಟ್ಟುತ್ತಿದ್ದ ಕಾರ್ಮಿಕರಿಗೆ ಶಿಕ್ಷೆ ನೀಡಿ ಕಟ್ಟಿಸಿದ ರೀತಿ, ಶಿಲ್ಪಿಗಳ ಅಂಗಾಂಗಗಳನ್ನು ಬರ್ಬರವಾಗಿ ಕತ್ತರಿಸಿದ ರಾಜರು ಮತ್ತು ಪ್ರತಿರೋಧ ವ್ಯಕ್ತಪಡಿಸುವವರ ರುಂಡವನ್ನೇ ಹಾರಿಸಿ ಕೇಕೆ ಹಾಕಿದ ವಿಕೃತ ಮಹಾರಾಜರುಗಳೆಲ್ಲರು ನನ್ನ ಮನಸ್ಸಿನ ಚಿತ್ರಣದ ಮೂಲಕ ಹಾದು ಹೋಗಿದ್ದರಿಂದ ನನಗೆ ಮನದ ಆಳದಲ್ಲಿ ಕಸಿವಿಸಿ ಹಾಗೂ ಅಸಹ್ಯದ ಭಾವನೆಗಳು ಬರತೊಡಗಿದವು. ಹೀಗೆ ಚಿಂತಾಕ್ರಾಂತನಾದ ನಾನು ನನ್ನ ಅಂತರಂಗವನ್ನು ಪ್ರವೇಶಿಸಿದಾಗ ಅತಿ ಅದ್ಭುತವಾಗಿ ಕಂಡಿದ್ದು ಸೃಷ್ಟಿಕರ್ತ ಸೃಷ್ಟಿಸಿದ “ಹೆಣ್ಣು”. ಈ ಹೆಣ್ಣು ಅದ್ಭುತಗಳಲ್ಲಿ ಅದ್ಭುತ ಎಂದು ಕರೆಸಿಕೊಳ್ಳಲು ಕಾರಣ ಏನೆಂದರೆ..
“ಮೊಟ್ಟೆ ಮೊದಲೋ ಅಥವಾ ಕೋಳಿ ಮೊದಲೋ” ಎಂಬ ತರ್ಕವು ಬೇಡ. ಹಾಗೆಯೇ ಹೆಣ್ಣು ಮೇಲೋ ಅಥವಾ ಗಂಡು ಮೇಲೋ ಎಂಬ ವಾದವೂ ಬೇಡ.
ಮೊದಲನೆಯದಾಗಿ ಹೆಣ್ಣೆಂಬ ಜೀವ 9 ತಿಂಗಳ ಕಾಲ ಆಸೆಗಳನ್ನೆಲ್ಲ ಬದಿಗಿಟ್ಟು ಒಂದೇ ಆಸೆಯನ್ನು ಮನದಲ್ಲಿ ಹೊಂದಿ, ಹೃದಯವನ್ನು ಕೇಂದ್ರೀಕರಿಸಿ, ಮನೆಯಲ್ಲಿ ಮಗುವಿನ ಚಿತ್ರವನ್ನು ವೀಕ್ಷಿಸುತ್ತ, ಬರುವ ಕಂದನನ್ನು ನೆನೆಯುತ, ಕೆಲಸ ಕಾರ್ಪಣ್ಯಗಳಲ್ಲಿ ತೊಡಗಿ, ಅತ್ತೆ, ಮಾವರ ಸೇವೆಯನ್ನು ಗೈದು, ಗಂಡು ಮಗುವನ್ನು ನೆನೆಯುತಾ, ಹೆಣ್ಣಾದರೆ ಎನ್ನುವ ಭಯದಿಂದ ನೋವಿನ ಕ್ಷಣಗಳನ್ನು ಕಾಣುತಾ ಮಗುವಿಗೆ ಜನ್ಮ ನೀಡುವ ಈ ಹೆಣ್ಣು ಅದ್ಭುತವಲ್ಲವೇ?
ಎರಡನೆಯದಾಗಿ, ಗಂಡು ಮಗು ಹುಟ್ಟಿದರೆ ಮನೆಯಲ್ಲಿ ಸಂಭ್ರಮ, ಆದರೆ ಆ ಹೆಣ್ಣು, ಹೆಣ್ಣು ಮಗುವಿಗೆ ಜನ್ಮವಿತ್ತಾಗ ಯಾವ ಸಂಭ್ರಮ, ಗಂಡನ ತತ್ಸಾರ, ಅತ್ತೆ ಮಾವಂದಿರ ನಿಂದನೆ, ಬಂದ ಹೊಸ ಹೆಣ್ಣು ಜೀವಿಗೆ “ಬಂದೆಯಾ ಶನಿ” ಎಂಬ ನಾಮಕರಣ, ಹಿಂದೆ ಇದ್ದ ಗಂಡನ ವ್ಯಾಮೋಹದಲ್ಲಿ ಕ್ಷೀಣತೆ, ನೆನಪಿಗೆ ಬಂದಾಗ ಕಣ್ಣಲ್ಲಿ ನೀರು, ಅಸಾಹಾಯಕತೆಯ ಕೊರಗು, ಆ ಮಗುವಿಗೆ ನಿರುತ್ಸಾಹದ ಆರೈಕೆ. ಮನೆಯಲ್ಲಿ ತಾಯಿ ಆಸೆಗೆ ನೀರಸ ಪ್ರೋಕ್ಷಣೆ. ಇವೆಲ್ಲವನ್ನು ಮನದಲ್ಲಿ ಅದುಮಿ ಹೆಣ್ಣು ಮಗುವಿನಲ್ಲಿ ಭವಿಷ್ಯವನ್ನು ಕಾಣುವ ತಾಯಿ ಅದ್ಭುತವಲ್ಲವೇ?
ಮೂರನೆಯದಾಗಿ ಮಗಳಲ್ಲದಂತೆ ಕಾಣುವ ಅತ್ತೆ, ಕೆಲಸದವಳಂತೆ ಕಾಣುವ ಮಾವ, ಬೇಜವಾಬ್ದಾರಿ ಕುಡುಕ ಗಂಡ, ಹೆಂಡತಿ ತೃಷೆಗೆ ಮಾತ್ರ ಸೀಮಿತವೆಂದ ಪತಿ, “ಹೆಣ್ಣಿಗೇಕೆ ಶಾಲೆ” ಎಂಬ ಧೋರಣೆ, ಹೆಣ್ಣು ಮಗುವಿಗೆ ಹೆಣ್ಣು ಶತ್ರು ಎಂದು ತಿಳಿದು ತಾಯಿಯ ಅಳಲು, ಹೆಣ್ಣು ಮಗುವಿನ ಆಸೆಗಳನ್ನು ಚಿವುಟುವ ಪೋಷಕರು “ಅಮ್ಮಾ ನೀನು ಬೇಜಾರಾಗಬೇಡ ನಾನು ನಿನ್ನೊಂದಿಗೆ ಇರುವೆನು” ಎಂಬ ಹೆಣ್ಣು ಮಗುವಿನ ನೋಟ, ಇವುಗಳೆಲ್ಲವನ್ನು ಸಹನೆಯ ಅಡಿ ನೋಡುವ ತಾಯಿ ಸಹನಾಮಯಿಯಲ್ಲವೇ.
ನಾಲ್ಕನೆಯದಾಗಿ ಕಷ್ಟಪಟ್ಟು ದುಡಿದು ಸಾಕಿ, ಸಲಹಿ ಕೂಡಿಟ್ಟ ಹಣದಿಂದ ತಾಯಿ ತನ್ನ ಹೆಣ್ಣು ಮಗುವನ್ನು ಶಾಲೆಗೆ ಕಳಿಸಿ, ಗಂಡನ ಮನೆ ಚಿತ್ರಹಿಂಸೆಗಳನ್ನು ಸಹಿಸಿಕೊಂಡು, ಸಂಜೆಗೆ ಮಗಳು ಮನೆಗೆ ಸುರಕ್ಷಿತವಾಗಿ ಬರುವಳಾ ಎಂಬ ಅಮ್ಮನ ಭಯ. ಮಗಳನ್ನು ಆಹಾರವೆಂಬಂತೆ ಹೊಂಚು ಹಾಕಿ ಕಬಳಿಸಿ ನುಂಗಲೆತ್ನಿಸುವ ಕಾಮುಕ ಗಂಡು ಹೆಬ್ಬಾವುಗಳು, ಅಬಲೆ ಎಂದು ಲೆಕ್ಕಿಸದೆ ಕೆಲವು ಕಾಮಂಧ ಗಂಡು ಶಿಕ್ಷಕರು, ಇವೆಲ್ಲವನ್ನು ಲೆಕ್ಕಿಸದೆ ನಿರ್ದಿಷ್ಟ ದಾರಿಯಲ್ಲಿ, ಅತ್ತಿತ್ತ ನೋಡದೆ, ಯಾವುದೇ ಭಾವನೆಗಳನ್ನು ಹೊರಹಾಕದೆ ನೆಡೆಯುವ ಈ ಯುವ ನಾರಿಮಣಿ ಧೈರ್ಯವಂತೆಯಲ್ಲವೇ?
ಐದನೆಯದಾಗಿ ನೋಡು ನೋಡುತ್ತಿದ್ದಂತೆಯೇ ಮೈನೆರೆದು ದಷ್ಟ ಪುಷ್ಟವಾಗಿ ಬೆಳೆದ ಮಗಳನ್ನು ಗಂಡನ ಅಲ್ಪ ಸಹಾಯ ಸಿಕ್ಕರೂ, ಸಿಗದೇ ಇದ್ದರೂ ತನ್ನ ಬಳಿ ಇರುವ ಕೂಡಿಟ್ಟಿದ್ದ ಹಣ ಹಾಗೂ ಮೈಮೇಲೆ ಇರುವ ಚಿನ್ನಾಭರಣಗಳನ್ನು ಮಾರಿ ಸೂಕ್ತ ವರನನ್ನು ನೋಡಿ ವರದಕ್ಷಿಣೆಯನ್ನು ಕೊಟ್ಟು ಮದುವೆ ಮಾಡಿಸುವ ಈ ತಾಯಿ ತ್ಯಾಗಿಯಲ್ಲವೇ?
ಆರನೆಯದಾಗಿ ತಾಯಿಯ ಜೊತೆ ಅನೇಕ ವರ್ಷಗಳ ಕಾಲ ಬಾಂಧವ್ಯ ಹೊಂದಿ, ಮದುವೆ ಎಂಬ ವ್ಯಾಪಾರದಲ್ಲಿ ಆ ಬಂಧನ ಮುರಿದು, ಆಸೆ ಆಕಾಂಕ್ಷೆಗಳನ್ನು ಹೊತ್ತು, ಪರಿಚಯವೇ ಇಲ್ಲದ ಗಂಡನ ಮನೆ ಹೇಗೋ ಎಂತೋ ಮಗಳನ್ನು ಸ್ವೀಕರಿಸುವರೋ ಅಥವ ಇಲ್ಲವೋ, ಮಗಳ ತಪ್ಪುಗಳನ್ನು ಕ್ಷಮಿಸುವರೋ ಅಥವ ಇಲ್ಲವೋ, ಅತ್ತೆಗೆ ತಕ್ಕ ಸೊಸೆ, ಗಂಡನಿಗೆ ಒಳ್ಳೆಯ ಹೆಂಡತಿ ಆಗುವಳೋ ಅಥವ ಇಲ್ಲವೋ ಎಂದೆಲ್ಲಾ ತರ ತರಹದ ಯೋಚನೆಗಳಿಂದ ಹೊಸ ಮನೆಗೆ ಕಳಿಸುವ ತಾಯಿ ಪ್ರೇಮಾಮಯಿಯಲ್ಲವೆ?
ಓದುಗರೇ, ಈ ಹೆಣ್ಣನ್ನು ನಮ್ಮನೆಲ್ಲಾ ಅಗಲಿದ ಮಹಾನ್ ಅಂಕಿಗಳ ತಜ್ಞ ಹಾಗೂ ಖಗೋಳ ಶಾಸ್ತ್ರ ಜ್ಞ STEPHEN HAWKING, ಅವರು “ನನಗೆ ಎಲ್ಲವು ಗೊತ್ತಿದೆ, ಆದರೆ ಈ ಹೆಣ್ಣು ಮಾತ್ರ ನನಗೆ ಅರ್ಥವಾಗುವುದಿಲ್ಲ ” ಎಂದಿದ್ದರು. ಅವರ ಈ ಹೇಳಿಕೆಯಿಂದ ಹೆಣ್ಣಿಗಿಂತ ಬಲಶಾಲಿ ಮತ್ತು ಅದ್ಭುತಗಳಲ್ಲಿ ಅದ್ಭುತ ಶಕ್ತಿ ಮತ್ಯಾವುದೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆಯಲ್ಲವೇ….
– ಡಾ॥ ಎ.ಎಂ. ನಾಗೇಶ
ಖ್ಯಾತ ಮನೋರೋಗ ತಜ್ಞ
