ಹೊಳೆನರಸೀಪುರ ತಾಲ್ಲೂಕಿನ ರಾಮೇನಹಳ್ಳಿಯ ಕಲ್ಕಿ ಪರಂಜ್ಯೋತಿ ದೇವಸ್ಥಾನದಲ್ಲಿ ನಡೆದ ರಾಜ್ಯ ಮಟ್ಟದ ರಂಗಗೀತೆ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮ ಪ್ರೇಕ್ಷಕರ ಮನಸ್ಸಿಗೆ ವಿಶೇಷ ಆನಂದ ನೀಡಿತು. ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಸನ ಜಿಲ್ಲಾ ಘಟಕ ಮತ್ತು ಕದಂಬ ಸೇನೆ ಹೊಳೆನರಸೀಪುರ ತಾಲ್ಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಸಿದ್ಧ ನಾಟಕಕಾರ ಬಿ. ಪುಟ್ಟಸ್ವಾಮಯ್ಯ ಅವರ 129ನೇ ಜನ್ಮದಿನ ಪುಣ್ಯಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ ಉದ್ಘಾಟಿಸಿದರು. ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಆನ್ಲೈನ್ ಮೂಲಕ ಸಿನಿಮಾ ಹಾಡು, ಚಿತ್ರಕಲೆ, ಭರತನಾಟ್ಯ ಹಾಗೂ ರಂಗಗಾಯನ ಕಾರ್ಯಕ್ರಮಗಳನ್ನು ಪ್ರತಿ ವಾರ ನಡೆಸಲಾಗುತ್ತಿದೆ ಎಂದರು.

ನಿವೃತ್ತ ಉಪನ್ಯಾಸಕ ಡಾ. ಬರಾಳು ಶಿವರಾಮ ಅವರು ಬಿ. ಪುಟ್ಟಸ್ವಾಮಯ್ಯ ಅವರ “ಕುರುಕ್ಷೇತ್ರ” ನಾಟಕದ ಕುರಿತು ಉಪನ್ಯಾಸ ನೀಡಿದರು. “ಛಲದೊಳ್ ದುರ್ಯೋಧನಂ” ನಾಟಕದ ಕುರಿತು ಪ್ರೊ. ಎ.ಎಚ್. ಗಣೇಶ್ ಅಂಕಪುರ ಮಾತನಾಡಿ, ಮಹಾಭಾರತದ ಮಹತ್ವ ಹಾಗೂ ಅದರ ಪಾತ್ರಗಳ ವೈಶಿಷ್ಟ್ಯವನ್ನು ವಿವರಿಸಿದರು. ಶ್ರೀಕೃಷ್ಣ ಧರ್ಮರಕ್ಷಕನಾದರೆ ದುರ್ಯೋಧನ ಅಧರ್ಮದ ಪ್ರತಿನಿಧಿಯಾಗಿ ಚಿತ್ರಿತನಾಗಿದ್ದಾನೆ ಎಂದು ಹೇಳಿದರು. ನಾಟಕಕಾರ ಎಸ್.ಎಸ್. ಪುಟ್ಟೇಗೌಡ ಅವರು ಅನೇಕ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ವಿಶೇಷ ಗುರುತಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷೀಯ ನುಡಿಯಲ್ಲಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದರು. ಸ್ಪರ್ಧಾತ್ಮಕವಾಗಿ ರಂಗಗೀತೆಗಳನ್ನು ಅಭಿನಯದೊಂದಿಗೆ ಹಾಡಿದ ಕಲಾವಿದರ ಪ್ರತಿಭೆ ಮೆಚ್ಚುಗೆಗೆ ಪಾತ್ರವಾಯಿತು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ರಾಜ್ಯಮಟ್ಟದ ರಂಗಗೀತೆ ಹಾಗೂ ರಂಗದೃಶ್ಯಾವಳಿ ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮ ಆಯೋಜಕರಾದ ರಾಮೇನಹಳ್ಳಿಯ ಪುಟ್ಟಸ್ವಾಮಿಗೌಡ ಆರ್.ಕೆ. ಮಾತನಾಡಿ, ತಮ್ಮ ತಾಯಿ ಕಾಳಮ್ಮ ಹಾಗೂ ದಿವಂಗತ ತಂದೆ ಪುಟ್ಟಸ್ವಾಮಿಗೌಡರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಹೇಳಿದರು. ಜಿಲ್ಲೆಯ ಹೆಸರಾಂತ ಕಲಾವಿದರು ಗ್ರಾಮೀಣ ಜನರಿಗೆ ಮನರಂಜನೆ ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್ ಡಿ. ಉಡುಗೊರೆ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿ ಸಾಹಿತಿಗಳು ಹಾಗೂ ಕಲಾವಿದರನ್ನು ಸನ್ಮಾನಿಸಲಾಗುತ್ತಿದೆ ಎಂದರು. ಎಸ್.ಎಸ್. ಪುಟ್ಟೇಗೌಡ ಹಾಗೂ ಕವಿ ಎನ್.ಎಲ್. ಚನ್ನೇಗೌಡ ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ಮಿಲ್ಟ್ರಿ, ಹೇಮಂತಕುಮಾರ್, ವೆಂಕಟೇಗೌಡ, ಪಿಎಸ್ಐ ಎಚ್.ಕೆ. ನಾಗರಾಜು, ಎಎಸ್ಐ ರಂಗಣ್ಣ, ಸವಿತಾ ನರಸಿಂಹಮೂರ್ತಿ, ಕು. ಚಿನ್ಮಯಿ, ಚಂದ್ರ ಜಿ.ಆರ್., ರವಿಕುಮಾರ್, ಮಂಜೇಗೌಡ ಸೇರಿದಂತೆ ಹಲವರು ರಂಗಗೀತೆಗಳನ್ನು ಹಾಡಿ ರಂಜಿಸಿದರು.
ಹಾರ್ಮೋನಿಯಂನಲ್ಲಿ ಕೆ.ಹೆಚ್. ರಮೇಶ್ ಭಾಗವತ್, ಜಿ.ಜಿ. ಕೇಶವ ಹಾಗೂ ಎಂ.ಪಿ. ಪದ್ಮರಾಜ್ ಸಂಗೀತ ಮೆರಗು ನೀಡಿದರೆ, ತಬಲದಲ್ಲಿ ಓಡನಹಳ್ಳಿ ರಾಮು ಸಹಕರಿಸಿದರು. ಭಾಗವಹಿಸಿದ ಕಲಾವಿದರಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ನಂತರ 102 ವರ್ಷ ತುಂಬಿದ ಕಾಳಮ್ಮ ಅವರ ಮನೆಗೆ ತಂಡ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿತು.
