ಶ್ಲೋಕ – 55
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ॥೫೫॥
ಮತ್ ಕರ್ಮ ಕೃತ್ ಮತ್ ಪರಮಃ ಮತ್ ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮ್ ಏತಿ ಪಾಂಡವ –ಓ ಪಾಂಡವ, ಎಲ್ಲವನ್ನು ನನಗಾಗಿ ಮಾಡುವವನು, ನನ್ನನ್ನೆ ಪರದೈವವೆಂದು ತಿಳಿದವನು, ವಿಷಯದ ನಂಟು ತೊರೆದು ನನ್ನಲ್ಲಿ ಭಕ್ತಿಯಿಟ್ಟವನು, ಯಾವ ಜೀವಿಗಳಲ್ಲು ಹಗೆಗೊಳ್ಳದವನು –ನನ್ನನ್ನು ಪಡೆಯುತ್ತಾನೆ.
ಭಗವಂತನನ್ನು ಕಾಣಲು ಭಕ್ತಿಯ ಜೊತೆಗೆ ಇರುವ ಅತಿ ಮುಖ್ಯವಾದ ಅಂಶವನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ನಾವು ಮಾಡುವ ಕಾರ್ಯವನ್ನು ‘ನಾನು ಮಾಡಿದೆ’ ಎಂದು ಅಹಂಕಾರ ಪಡದೆ, ಭಗವಂತ ನನ್ನ ಕೈಯಿಂದ ಮಾಡಿಸಿದ ಎನ್ನುವ ಅನುಸಂಧಾನ; ಅರ್ಪಣ ಭಾವ, ಫಲದ ಅಪೇಕ್ಷೆ ಇಲ್ಲದ ಭಕ್ತಿ, ದ್ವೇಷ ಪ್ರತೀಕಾರವಿಲ್ಲದೆ ಭಗವಂತನಲ್ಲಿ ಶರಣಾಗತಿ, ನಿರ್ಲಿಪ್ತ ಭಾವದಿಂದ ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು ಆತನನ್ನು ಪ್ರೀತಿಸುವುದು-ಇದರಿಂದ ಭಗವಂತನನ್ನು ಕಾಣಲು ಸಾಧ್ಯ.
