ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪವಿತ್ರ ಹಾಗೂ ಅಪರೂಪದ ಯೋಗ ಎಂದು ಪರಿಗಣಿಸಲಾಗುವ ‘ಗುರು ಪುಷ್ಯ ಮಹಾಯೋಗ’ವು ಜೂನ್ 18, 2026 ರಿಂದ ಆರಂಭವಾಗುತ್ತಿದೆ. ಮುಂದಿನ 61 ದಿನಗಳ ಕಾಲ ಅಂದರೆ ಆಗಸ್ಟ್ 19, 2026ರ ಬುಧವಾರದವರೆಗೆ ಈ ಮಹಾಯೋಗವು ಇರಲಿದ್ದು, ಇದು ಪ್ರಕೃತಿ ಹಾಗೂ ಮಾನವನ ಜೀವನದ ಮೇಲೆ ಭಾರಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರು ತಮ್ಮ ‘ನಿತ್ಯಭಕ್ತಿ’ ಕಾರ್ಯಕ್ರಮದಲ್ಲಿ ಈ ಕುರಿತು ವಿಸ್ತಾರವಾಗಿ ಮಾತನಾಡಿದ್ದು, “ಜೂನ್ 18 ರ ಗುರುವಾರ ರಾತ್ರಿ 9:32 ಕ್ಕೆ ದೇವಗುರು ಬೃಹಸ್ಪತಿಯು ಪುಷ್ಯ ನಕ್ಷತ್ರಕ್ಕೆ ಪ್ರವೇಶಿಸಲಿದ್ದು, ಆಗಸ್ಟ್ 19 ರ ಬೆಳಗಿನ ಜಾವ 3:37 ರವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯು ದ್ವಾದಶ ರಾಶಿಗಳ ಪೈಕಿ ಮುಖ್ಯವಾಗಿ 6 ರಾಶಿಗಳಿಗೆ ಜೇಪಾಟ್ ಹೊಡೆಯುವಂತೆ ಮಾಡಲಿದೆ,” ಎಂದು ತಿಳಿಸಿದ್ದಾರೆ.
ಏನಿದು ಗುರು ಪುಷ್ಯ ಯೋಗದ ಮಹತ್ವ?
ಜ್ಯೋತಿಷ್ಯದ ಪ್ರಕಾರ, ಗುರು ಗ್ರಹವನ್ನು ‘ಧರ್ಮ ಕಾರಕ’ ಹಾಗೂ ಪುಷ್ಯ ನಕ್ಷತ್ರದ ಅಧಿಪತಿಯಾದ ಶನಿದೇವನನ್ನು ‘ಕರ್ಮ ಕಾರಕ’ ಎಂದು ಕರೆಯಲಾಗುತ್ತದೆ. ಧರ್ಮ ಮತ್ತು ಕರ್ಮ ಕಾರಕರು ಒಟ್ಟಾಗಿ ಸಂಯೋಜನೆಗೊಳ್ಳುವುದು ನ್ಯಾಯ ಮತ್ತು ಅದೃಷ್ಟದ ದೇವತೆಗಳ ಮಿಲನಕ್ಕೆ ಸಮಾನವಾಗಿದೆ. ಈ 61 ದಿನಗಳ ಕಾಲಾವಧಿಯು ವಿವಾಹ, ಗೃಹಪ್ರವೇಶ, ಹೊಸ ವ್ಯಾಪಾರ ಆರಂಭ, ಒಡವೆಗಳ ಖರೀದಿ ಹಾಗೂ ಯಾವುದೇ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಮಠಾಧೀಶರು ಮತ್ತು ಪುರೋಹಿತರಿಗೆ ಇದು ಪರ್ವಕಾಲವಾಗಿದೆ.
ಅದೃಷ್ಟ ಹೊಳೆಯಲಿರುವ ಆ 6 ರಾಶಿಗಳು ಯಾವುವು?
1. ತುಲಾ ರಾಶಿ: ಈ ರಾಶಿಯವರಿಗೆ 10ನೇ ಮನೆಯಲ್ಲಿ (ಕರ್ಮ ಸ್ಥಾನ) ಈ ಯೋಗ ಸಂಭವಿಸುವುದರಿಂದ ಉದ್ಯೋಗದಲ್ಲಿ ಭಾರಿ ಪ್ರಗತಿ, ಪ್ರಮೋಷನ್ ಹಾಗೂ ವ್ಯಾಪಾರದಲ್ಲಿ ಲಾಭ ಸಿಗಲಿದೆ. ಶನಿವಾರ ಶನಿ ದರ್ಶನ ಮಾಡುವುದರಿಂದ ಮತ್ತಷ್ಟು ಶುಭವಾಗಲಿದೆ. 2. ವೃಶ್ಚಿಕ ರಾಶಿ: 9ನೇ ಮನೆಯಾದ ಭಾಗ್ಯ ಸ್ಥಾನದಲ್ಲಿ ಈ ಯೋಗ ಇರುವುದರಿಂದ ಆಕಸ್ಮಿಕ ಧನಲಾಭ, ಕೋರ್ಟ್ ಕೇಸ್ಗಳಲ್ಲಿ ಜಯ ಮತ್ತು ಹೊಸ ಆಸ್ತಿ ಖರೀದಿ ಯೋಗವಿದೆ. ಗುರುವಾರ ಅನ್ನದಾನ ಮಾಡುವುದು ಶ್ರೇಷ್ಠ. 3. ಧನುಸ್ಸು ರಾಶಿ: ಅಷ್ಟಮ ಸ್ಥಾನದಲ್ಲಿ ಈ ಯೋಗವು ಸಕಾರಾತ್ಮಕ ಬದಲಾವಣೆ ತರಲಿದೆ. ಮಾನಸಿಕ ನೆಮ್ಮದಿ, ಅಪವಾದಗಳಿಂದ ಮುಕ್ತಿ ಹಾಗೂ ಸ್ಥಿರ ಆಸ್ತಿ ಸಂಪಾದನೆಯಾಗಲಿದೆ. ಶನಿವಾರ ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವುದು ಒಳ್ಳೆಯದು. 4. ಮಕರ ರಾಶಿ: ಸಪ್ತಮ ಸ್ಥಾನದ ಪ್ರಭಾವದಿಂದಾಗಿ ವಿವಾಹ ಯೋಗ ಕೂಡಿಬರಲಿದೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಗುರುವಾರ ಗುರುಗಳಿಗೆ ವಸ್ತ್ರದಾನ ಮಾಡುವುದು ಉತ್ತಮ. 5. ಕುಂಭ ರಾಶಿ: 6ನೇ ಮನೆಯಲ್ಲಿ ಈ ಯೋಗ ಇರುವುದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಸುಧಾರಿಸುತ್ತವೆ. ಬ್ಯಾಂಕ್ ಲೋನ್ ಮಂಜೂರಾಗಲಿದ್ದು, ಸಾಲದ ಬಾಧೆಯಿಂದ ಮುಕ್ತಿ ಸಿಗಲಿದೆ. ವಿದೇಶ ಪ್ರಯಾಣದ ಯೋಗವಿದೆ. 6. ಮೀನ ರಾಶಿ: ಪಂಚಮ ಸ್ಥಾನದಲ್ಲಿ ಗುರು ಪುಷ್ಯ ಯೋಗ ಇರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ರೈತರು ಮತ್ತು ವ್ಯಾಪಾರಿಗಳಿಗೆ ಬಂಪರ್ ಲಾಭವಾಗಲಿದ್ದು, ಶತ್ರುಗಳು ಮಿತ್ರರಾಗಲಿದ್ದಾರೆ.
ಇತರ ರಾಶಿಗಳ ಮೇಲಿನ ಪ್ರಭಾವ:
ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ ಮತ್ತು ಕನ್ಯಾ ರಾಶಿಗಳಿಗೆ ಈ ಯೋಗವು ನೇರವಾಗಿ ಮಹಾ ಶುಭ ಫಲಗಳನ್ನು ನೀಡದಿದ್ದರೂ, ಈ 61 ದಿನಗಳ ಅವಧಿಯಲ್ಲಿ ಧರ್ಮ ಮಾರ್ಗದಲ್ಲಿ ನಡೆದು, ಶಿಸ್ತು ಕಾಪಾಡಿಕೊಂಡರೆ ಅವರಿಗೂ ಕೂಡ ಅದೃಷ್ಟ ಒಲಿಯಲಿದೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.
(ಗಮನಿಸಿ: ಈ ಎಲ್ಲಾ ಮಾಹಿತಿ ಆಯಾ ಜ್ಯೋತಿಷಿಗಳ ವೈಯಕ್ತಿಕ ಶಾಸ್ತ್ರಾಧಾರಿತ ಲೆಕ್ಕಾಚಾರ ಮತ್ತು ನಂಬಿಕೆಯನ್ನು ಆಧರಿಸಿದೆ.)
