ಬೆಂಗಳೂರು, ಜೂ.26: ವನ್ಯಜೀವಿ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿಯನ್ನು ಪುನರಾರಂಭಿಸಲು ಅನುಮತಿ ನೀಡಿದೆ. ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿಯ ವರದಿಯನ್ನು ಆಧರಿಸಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಮಾಹಿತಿಯಂತೆ, ವೈಜ್ಞಾನಿಕ ಮೌಲ್ಯಮಾಪನ ಹಾಗೂ ಸಾಗಣೆ ಸಾಮರ್ಥ್ಯದ ಆಧಾರದ ಮೇಲೆ ಸಮಿತಿಯು ನೀಡಿದ ಶಿಫಾರಸುಗಳನ್ನು ಅನುಸರಿಸಿ ನಿಯಂತ್ರಿತ ರೀತಿಯಲ್ಲಿ ಸಫಾರಿ ನಡೆಸಲು ಸೂಚಿಸಲಾಗಿದೆ. ಈ ಕ್ರಮದಿಂದ ವನ್ಯಜೀವಿ ಸಂರಕ್ಷಣೆಗೂ ಧಕ್ಕೆಯಾಗದಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದ್ದು, ಸ್ಥಳೀಯ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳಿಗೂ ನೆರವಾಗಲಿದೆ.
2025ರ ನವೆಂಬರ್ನಲ್ಲಿ ಸ್ಥಗಿತಗೊಂಡಿದ್ದ ಸಫಾರಿ
ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ 2025ರ ನವೆಂಬರ್ನಲ್ಲಿ ಬಂಡೀಪುರ ಮತ್ತು ನಾಗರಹೊಳೆ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ನಂತರ ತಾಂತ್ರಿಕ ಸಮಿತಿಯನ್ನು ರಚಿಸಿ ಪರಿಸ್ಥಿತಿಯ ಅಧ್ಯಯನ ನಡೆಸಲಾಗಿತ್ತು.
ಸಮಿತಿಯ ಮಧ್ಯಂತರ ವರದಿಯ ಆಧಾರದ ಮೇಲೆ 2026ರ ಫೆಬ್ರವರಿ 19ರಿಂದ ಶೇ.50ರಷ್ಟು ಸಾಮರ್ಥ್ಯದಲ್ಲಿ ಹಾಗೂ ಕಡಿತಗೊಳಿಸಿದ ಅವಧಿಯೊಂದಿಗೆ ಸಫಾರಿಗೆ ಅವಕಾಶ ಕಲ್ಪಿಸಲಾಗಿತ್ತು. ಆ ವೇಳೆ ಬಂಡೀಪುರದಲ್ಲಿ ಸಫಾರಿ ಅವಧಿಯನ್ನು 8 ಗಂಟೆಯಿಂದ 5 ಗಂಟೆಗೆ, ಸುಂಕದಕಟ್ಟೆಯಲ್ಲಿ 6 ಗಂಟೆಗೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆಗೆ ಸೀಮಿತಗೊಳಿಸಲಾಗಿತ್ತು.

ಈಗ ಮತ್ತೆ ಪೂರ್ಣ ಪ್ರಮಾಣದ ಸಫಾರಿ
ಈಗ ತಾಂತ್ರಿಕ ಸಮಿತಿಯ ಅಂತಿಮ ವರದಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮೊದಲಿನಂತೆ ಪೂರ್ಣ ಪ್ರಮಾಣದಲ್ಲಿ ಸಫಾರಿ ನಡೆಸಲು ಹಸಿರು ನಿಶಾನೆ ನೀಡಿದೆ. ಸಮಿತಿಯ ಶಿಫಾರಸಿನಂತೆ ನಿಯಂತ್ರಿತ ಹಾಗೂ ಸುರಕ್ಷಿತ ರೀತಿಯಲ್ಲಿ ಸಫಾರಿ ನಡೆಸುವ ಮೂಲಕ ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವುದರ ಜೊತೆಗೆ ವನ್ಯಜೀವಿಗಳ ಸಂರಕ್ಷಣೆಯ ಮೇಲೂ ವಿಶೇಷ ಗಮನ ಹರಿಸಲಾಗುವುದು.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಂಡೀಪುರ ಮತ್ತು ನಾಗರಹೊಳೆಗೆ ಭೇಟಿ ನೀಡುವ ವನ್ಯಜೀವಿ ಪ್ರಿಯರು ಹಾಗೂ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
