ಸಕಲೇಶಪುರ, ಜೂ.26: ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಒಂದೇ ಕುಟುಂಬದ ಇಬ್ಬರು ರಸ್ತೆ ಅಪಘಾತಕ್ಕೀಡಾಗಿರುವ ಮನಕಲಕುವ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ತಾತನನ್ನು ಆಂಬ್ಯುಲೆನ್ಸ್ಗೆ ಹತ್ತಿಸುತ್ತಿದ್ದ ವೇಳೆ, ರಸ್ತೆ ಮಧ್ಯೆ ನಿಂತಿದ್ದ 10ನೇ ತರಗತಿ ವಿದ್ಯಾರ್ಥಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ.
ಗಾಯಗೊಂಡ ವಿದ್ಯಾರ್ಥಿಯನ್ನು ಪಟ್ಟಣದ ಬಾಳೆಗದ್ದೆ ನಿವಾಸಿ ಹೇಮಂತ್ ಅವರ ಪುತ್ರ ಭವಿಷ್ ಎಂದು ಗುರುತಿಸಲಾಗಿದೆ.

ಏನಿದು ಘಟನೆ?
ಬುಧವಾರ ರಾತ್ರಿ ಬಾಳೆಗದ್ದೆ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ಭವಿಷ್ ಅವರ ತಾತ ಸಿದ್ದರಾಜು ಅವರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಗಾಯಗೊಂಡಿದ್ದರು. ಕೂಡಲೇ ಸ್ಥಳಕ್ಕೆ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು.
ತಾತನನ್ನು ಆಂಬ್ಯುಲೆನ್ಸ್ಗೆ ಹತ್ತಿಸುತ್ತಿದ್ದ ವೇಳೆ ರಸ್ತೆ ಮಧ್ಯೆ ನಿಂತಿದ್ದ ಮೊಮ್ಮಗ ಭವಿಷ್ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ಕುಟುಂಬಕ್ಕೆ ಎರಡು ಆಘಾತ
ಕೆಲವೇ ಕ್ಷಣಗಳ ಅಂತರದಲ್ಲಿ ತಾತ ಮತ್ತು ಮೊಮ್ಮಗ ಇಬ್ಬರೂ ರಸ್ತೆ ಅಪಘಾತಕ್ಕೀಡಾಗಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಈ ಘಟನೆ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ.
ಸಿಸಿಟಿವಿಯಲ್ಲಿ ಸೆರೆ
ಈ ಅಪಘಾತದ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಘಾತದ ದೃಶ್ಯ ಕಂಡ ಸಾರ್ವಜನಿಕರು ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಆಗ್ರಹಿಸಿದ್ದಾರೆ.
