ಶ್ಲೋಕ – 15
ಅರ್ಜುನ ಉವಾಚ ।
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಂ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥೧೫॥
ಅರ್ಜುನ ಉವಾಚ-ಅರ್ಜುನ ನುಡಿದನು :
ಪಶ್ಯಾಮಿ ದೇವಾಂನ್ ತವ ದೇವ ದೇಹೇ ಸರ್ವಾನ್ ತಥಾ ಭೂತ ವಿಶೇಷ ಸಂಘಾನ್ ।
ಬ್ರಹ್ಮಾಣಮ್ ಈಶಮ್ ಕಮಲಾಸನಸ್ಥಂ ಋಷೀನ್ ಚ ಸರ್ವಾನ್ ಉರಗಾನ್ ಚ ದಿವ್ಯಾನ್ –ಓ ದೇವ, ನಿನ್ನ ಮೈಯಲ್ಲಿ ಕಾಣುತ್ತಿದ್ದೇನೆ ದೇವತೆಗಳನ್ನೆಲ್ಲ. ಅಂತೆಯೆ ಬಗೆಬಗೆಯ ಜೀವಿಗಳ ಗಡಣಗಳನ್ನು. ಬ್ರಹ್ಮನನ್ನು, ಅವನ ತೊಡೆಯಲ್ಲಿ ಕುಳಿತ ಶಿವನನ್ನು, ಎಲ್ಲ ಋಷಿಗಳನ್ನು ಮತ್ತು ದಿವ್ಯ ಶಕ್ತಿಯ ಉರಗಗಳನ್ನು.
ಅರ್ಜುನ ಕೃಷ್ಣನ ಅತ್ಯದ್ಭುತ ರೂಪವನ್ನು ನೋಡುತ್ತಿದ್ದಾನೆ. ಆತನಿಗೆ ಸಮಸ್ತ ದೇವತೆಗಳೂ ಆ ಭಗವಂತನೊಳಗೆ ಕಾಣುತ್ತಿದ್ದಾರೆ. ದೇವತೆಗಳು, ರಾಕ್ಷಸರು, ಅಸುರರು, ಗಂಧರ್ವರು, ಅಪ್ಸರರು, ಯಕ್ಷರು , ಮನುಷ್ಯರು, ಪ್ರಾಣಿಗಳು ಹೀಗೆ ಎಲ್ಲರು. ಮುಖ್ಯವಾಗಿ ಅರ್ಜುನ ಭಗವಂತನೊಳಗೆ ಚತುರ್ಮುಖ ಬ್ರಹ್ಮ, ಶಿವ, ಮಹಾನ್ ಋಷಿಗಳು ಮತ್ತು ದೇವಾಂಶ ಸಂಭೂತ ದಿವ್ಯ ಉರಗಗಳನ್ನು ಆ ಶೇಷಶಾಯಿ ಭಗವಂತನಲ್ಲಿ ಕಾಣುತ್ತಿದ್ದಾನೆ.
