ಶ್ಲೋಕ – 15
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ ।
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ ವೇದವಿದೇವ ಚಾಹಮ್ ॥೧೫॥
ಸರ್ವಸ್ಯ ಚ ಅಹಮ್ ಹೃದಿ ಸನ್ನಿವಿಷ್ಟಃ ಮತ್ತಃ ಸ್ಮೃತಿಃ ಜ್ಞಾನಮ್ ಅಪೋಹನಮ್ ಚ ।
ವೇದೈಃ ಚ ಸರ್ವೈಃ ಅಹಮ್ ಏವ ವೇದ್ಯಃ ವೇದಾಂತಕೃತ್ ವೇದವಿತ್ ಏವ ಚ ಅಹಮ್—ಎಲ್ಲ ಹೃದಯದಲ್ಲಿ ನಾನು ನೆಲೆಸಿರುವೆ. ನೆನಪು, ಅರಿವು, ಮರೆವು ಎಲ್ಲ ನನ್ನ ಕೊಡುಗೆ. ಎಲ್ಲ ವೇದಗಳಿಂದ ಅರಿಯಬೇಕಾದವನು ನಾನೆ. ವೇದಾಂತ ಸೂತ್ರಗಳ ನೊರೆದವನು, ವೇದಗಳ ಮರ್ಮವನ್ನರಿತವನು ನಾನೆ.
‘ಸರ್ವಸ್ಯ ಚ ಅಹಮ್ ಹೃದಿ’- ಭಗವಂತ ಅಹಂ ಶಬ್ದ ವಾಚ್ಯನಾಗಿ ನಮ್ಮೊಳಗೆ ತುಂಬಿದ್ದಾನೆ. ನಮ್ಮ ಹೊರಗಿರುವ ಭಗವಂತನ ರೂಪಕ್ಕೆ ‘ಅಹಃ’ ಎಂದರೆ, ನಮ್ಮೊಳಗಿನ ಆತನ ರೂಪಕ್ಕೆ ‘ಅಹಂ’ ಎನ್ನುತ್ತಾರೆ. ನಮ್ಮೊಳಗಿರುವ ಭಗವಂತ ಸದಾ ನಮ್ಮೊಂದಿಗಿದ್ದು, ನಮ್ಮನ್ನು ರಕ್ಷಿಸುತ್ತಿರುತ್ತಾನೆ. ಸಾವಿನಲ್ಲಿ ಸ್ಥೂಲ ಶರೀರವನ್ನು ಬಿಟ್ಟು ಹೊರಹೋಗುವಾಗ ಕೂಡ ಭಗವಂತ ನಮ್ಮೊಂದಿಗಿರುತ್ತಾನೆ. ಆತ ನಮ್ಮನ್ನು ಒಂದು ಕ್ಷಣ ಬಿಟ್ಟಿರುವುದಿಲ್ಲ. ಆತನ ನೆಲೆ ನಮ್ಮ ಲಿಂಗಶರೀರದೊಳಗಿರುವ ಸ್ವರೂಪದ ಆತ್ಮ. ಈ ಆತ್ಮನೇ ‘ಅಹಂ’. ಇಂಥಹ ಭಗವಂತನ ಪ್ರಜ್ಞೆ ನಮಗಿದ್ದರೆ ‘ನಾನು ಮಾಡಿದೆ’ ಎನ್ನುವ ಅಹಂಕಾರ ನಮ್ಮನ್ನು ಕಾಡದು.
ಕಠೋಪನಿಷತ್ತಿನಲ್ಲಿ ಹೇಳುವಂತೆ: “ಅಂಗುಷ್ಠಮಾತ್ರಃ ಪುರುಷೋಽನ್ತರಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಟಃ …”|೨-೩-೭| ಎಲ್ಲ ಜೀವರ ಒಳಗೂ ಅಂಗುಷ್ಠಮಾತ್ರನಾಗಿ ಎಂದೆಂದೂ ದುಃಖದ ಲೇಪವಿಲ್ಲದೆ ನಿರ್ಲಿಪ್ತನಾಗಿ ಭಗವಂತ ತುಂಬಿದ್ದಾನೆ. ಮಧ್ವಾಚಾರ್ಯರು ಕಠೋಪನಿಷತ್ತಿಗೆ ಭಾಷ್ಯ ಬರೆಯುತ್ತ ಹೇಳುತ್ತಾರೆ:
ನಮೋ ಭಗವತೇ ತಸ್ಮೈ ಸರ್ವತಃ ಪರಮಾಯ ತೇ |
ಸರ್ವಪ್ರಾಣಿಹೃದಿಸ್ಥಾಯ ವಾಮನಾಯ ನಮೋ ನಮಃ ||ಸರ್ವಮೂಲ||
ಇಲ್ಲಿ-ಎಲ್ಲರ ಹೃದಯ ಅಂತರ್ಯಾಮಿಯಾಗಿರುವ ಭಗವಂತನ ರೂಪ ‘ವಾಮನ’ ರೂಪ ಎನ್ನುವ ಸುಳಿವು ನಮಗೆ ಸಿಗುತ್ತದೆ. ಆದ್ದರಿಂದ ಉಪಾಸನೆಯಲ್ಲಿ ನಾವು ನಮ್ಮ ಅಂತರ್ಗತ ಭಗವಂತನನ್ನು ವಾಮನ ರೂಪದಲ್ಲಿ ಉಪಾಸನೆ ಮಾಡಬೇಕು.
“ಮತ್ತಃ ಸ್ಮೃತಿರ್ಜ್ಞಾನಮಪೋಹನಂ”-ನಮಗೆ ಸ್ಮರಣಶಕ್ತಿಯನ್ನು ಕೊಡುವವನು ಆ ಭಗವಂತ. ಜ್ಞಾನ ಬರುವುದೂ ಭಗವಂತನಿಂದ, ಬಂದ ಜ್ಞಾನ ನೆನಪಿನಲ್ಲಿರುವುದೂ ಭಗವಂತನಿಂದ. ಕೇನೋಪನಿಷತ್ತಿನಲ್ಲಿ ಹೇಳುವಂತೆ: ಅಥಾಧ್ಯಾತ್ಮಂ ಯದ್ದೇತದ್ಗಚ್ಛತೀವ ಚ ಮನೋSನೇನ ಚೈತದುಪಸ್ಮರತ್ಯಭೀಕ್ಷ್ಣಂ ಸಂಕಲ್ಪಃ || ೪-೫ || ನಮಗೆ ನೆನಪಿನ ಶಕ್ತಿಯನ್ನು ಕೊಡುವ ಭಗವಂತನ ಅನಿರುದ್ಧ ರೂಪದ ಉಪಾಸನೆ ಇದಾಗಿದೆ. ಹೇಗೆ ನೆನಪಿನ ಶಕ್ತಿ ಕೊಡುತ್ತಾನೋ ಹಾಗೆ ಮರೆಯುವಂತೆ ಮಾಡುವವನೂ ಅವನೇ! ಕೆಲವೊಮ್ಮೆ ಅಪರೋಕ್ಷ ಜ್ಞಾನಿಗಳೂ ಕೂಡ ಭಗವಂತನನ್ನು ಮರೆತುಬಿಡುತ್ತಾರೆ(ಭಗವಂತ ಮರೆಯುವಂತೆ ಮಾಡುತ್ತಾನೆ). ಇದಕ್ಕೆ ದೃಷ್ಟಾಂತ ಭಾಗವತದಲ್ಲಿ ಬರುವ ಗರ್ಗಾಚಾರ್ಯರ ಕಥೆ. ಭಗವಂತನಿಗೆ ‘ಕೃಷ್ಣ’ ಎಂದು ನಾಮಕರಣ ಮಾಡಿ, ಕೃಷ್ಣನ ಭಕ್ತರಾಗಿದ್ದ ಗರ್ಗಾಚಾರ್ಯರು, ಯಾವುದೋ ಒಂದು ಕೆಟ್ಟ ಸನ್ನಿವೇಶದಲ್ಲಿ ಎಲ್ಲವನ್ನೂ ಮರೆತು, ‘ಕೃಷ್ಣನನ್ನು ಕೊಲ್ಲುವ ಮಗ ಹುಟ್ಟಬೇಕು’ ಎಂದು ತಪಸ್ಸು ಮಾಡುತ್ತಾರೆ! ಎಂಥಾ ವಿಪರ್ಯಾಸ. ಆದರೆ ಇದೆಲ್ಲವೂ ಆ ಭಗವಂತನ ಲೀಲೆ. ಆತನ ಲೀಲೆಯ ಹಿಂದಿರುವುದು ದ್ವೇಷವಲ್ಲ-ಕೇವಲ ಕಾರುಣ್ಯ.
ಕೃಷ್ಣ ಹೇಳುತ್ತಾನೆ: “ ಸಮಸ್ತ ವೇದಗಳಿಂದ ಅರಿಯಬೇಕಾದವನು ನಾನು” ಎಂದು. ವೇದದ ಪ್ರತಿಯೊಂದು ಪದವೂ ಭಗವದ್ ಪರವಾಗಿದೆ ಎನ್ನುವುದನ್ನು ಬ್ರಹ್ಮಸೂತ್ರ ಸ್ಪಷ್ಟವಾಗಿ ಹೇಳುತ್ತದೆ. ವೇದಾಂತ ಎಂದರೆ ಉಪನಿಷದ್ ಎಂದು ಕೆಲವರು ಹೇಳುವುದುಂಟು. ಆದರೆ ವೇದಾಂತ ಅಂದರೆ ‘ವೇದದ ನಿರ್ಣಯ’-ಅದೇ ಬ್ರಹ್ಮಸೂತ್ರ. ಇದು ಸಮಸ್ತ ವೇದವನ್ನು ಸಮನ್ವಯ ಮಾಡಿ ಹೇಳುವ ಗ್ರಂಥ. ವೇದ ಅನಾದಿನಿತ್ಯ, ವೇದದ ಮರ್ಮವನ್ನು ಪೂರ್ಣ ತಿಳಿದವನು ಆ ಭಗವಂತನೊಬ್ಬನೆ.
ಈ ಕ್ರಿಯೆ ಮಾಡು ಎಂದರೆ ಇನ್ನೊಂದು ಕಡೆ ಇನ್ನೊಂದು ಕ್ರಿಯೆಯನ್ನು ಮಾಡಬೇಡ ಎನ್ನುತ್ತದೆ. ಉದಾಹರಣೆಗೆ “ಸೋಮಪಾನ ಮಾಡು-ಸುರಪಾನ ಮಾಡಬೇಡ” ಎನ್ನುತ್ತದೆ ವೇದ. ಇದರ ಅರ್ಥ : ಸೋಮಪಾನ ಅಧ್ಯಾತ್ಮ ಚಿಂತನೆಗೆ ಮನಸ್ಸನ್ನು ಅಣಿಗೊಳಿಸುತ್ತದೆ, ಅದರಿಂದ ಭಗವಂತನನ್ನು ತಿಳಿಯಬಹುದು; ಸುರಪಾನ ಮಾಡಿದರೆ ಅದರಿಂದ ಬುದ್ಧಿ ಕೆಡುತ್ತದೆ ಅದು ಭಗವಂತನಿಂದ ನಮ್ಮನ್ನು ದೂರ ಮಾಡುತ್ತದೆ. ಹೀಗೆ ವೇದದಲ್ಲಿ ಹೇಳುವ ಪ್ರತಿಯೊಂದು ಕ್ರಿಯೆಯೂ ಅಂತತಃ ಭಗವಂತನನ್ನೇ ಹೇಳುತ್ತವೆ. ಕೆಲವು ಕಡೆ ವೇದ ಸೃಷ್ಟಿ-ಸಂಹಾರದ ಬಗ್ಗೆ ಹೇಳುತ್ತದೆ; ಸೃಷ್ಟಿಯ ಕ್ರಮವನ್ನು ಹೇಳುತ್ತದೆ. ಇದು “ಭಗವಂತ ಈ ರೀತಿ ಸೃಷ್ಟಿ ಕ್ರಿಯೆಯನ್ನು ಮಾಡುತ್ತಾನೆ” ಎಂದು ಭಗವಂತನನ್ನೇ ಹೇಳುವ ಸಾಲುಗಳು.
ವೇದ ಸೂಕ್ತಗಳು ಒಂದೊಂದು ಕಡೆ ಒಂದೊಂದು ದೇವತೆಗಳ ಹೆಸರನ್ನು ಹೇಳುತ್ತವೆ. ಒಂದು ಕಡೆ ಅಗ್ನಿ, ಇನ್ನೊಂದು ಕಡೆ ಇಂದ್ರ, ಮತ್ತೊಂದು ಕಡೆ ಸರಸ್ವತಿ, ಹೀಗೆ. ಇಲ್ಲಿ ನಮಗೆ ಇದು ಬಹುದೇವತಾ ವಾದವಾಗಿ ಕಾಣಬಹುದು. ಆದರೆ ಕೃಷ್ಣ ಹೇಳಿದ “ಅಭಿಧತ್ತೇ ಮಾಂ” ಎಂದು. ಉದಾಹರಣೆಗೆ “ಆತ್ಮನಃ ಆಕಾಶಃ ಸಂಭೂತಃ”. ಅಹಂಕಾರ ತತ್ವದಿಂದ ಆಕಾಶ ದೇವತೆ-ಗಣಪತಿ ಹುಟ್ಟಿದ. ಆಕಾಶ ಸೃಷ್ಟಿ ಎಂದರೆ ಇದ್ದ ಅವಕಾಶದಲ್ಲಿ(Space), ಒಂದು ಆವರಣ(ವಾತಾವರಣ) ಸೃಷ್ಟಿ. ಅದರ ಅಭಿಮಾನಿ ದೇವತೆಯಾಗಿ ಗಣಪತಿ ಹುಟ್ಟಿದ. ಗಣಪತಿಯೊಳಗೆ ಆಕಾಶದಲ್ಲಿ ತುಂಬಿರುವ ಭಗವಂತ-ಆಕಾಶನಾಮಕನಾಗಿ ಅವತರಿಸಿದ. ಹೀಗೆ ಪ್ರತಿಯೊಂದು ವೇದ ಶ್ಲೋಕವೂ ಕೂಡ ಅಂತತಃ ಹೇಳುವುದು ಭಗವಂತನನ್ನು.
ವೇದದಲ್ಲಿ ಬರುವ ಪ್ರತಿಯೊಂದು ಶಬ್ದಗಳು ಭಗವಂತನನ್ನು ಹೇಗೆ ಹೇಳುತ್ತವೆ ಎನ್ನುವುದನ್ನು ಈ ಉದಾಹರಣೆಯಲ್ಲಿ ಕಾಣಬಹುದು. ಉದಾಹರಣೆ: ‘ಅಗ್ನಿ’. ಅ+ಗ+ನಿ=ಅಗ್ನಿ. ಚಲನೆ ಇಲ್ಲದ ವಸ್ತುವಿಗೆ(ಅಗ) ಚಲನೆ ಕೊಡುವವನು-ಅಗ-ನಿ. ಭಗವಂತ ಇಡೀ ವಿಶ್ವಕ್ಕೆ ಚಲನೆ ಕೊಡುವವ ಆದ್ದರಿಂದ ಆತ ಅಗ್ನಿ.
ವೇದದಲ್ಲಿರುವ ಒಂದೊಂದು ಅಕ್ಷರವೂ ಭಗವಂತನ ನಾಮ(abbreviation). ಉದಾಹರಣೆಗೆ ‘ಅ’. ಅ=ಅಜಃ(ಹುಟ್ಟಿಲ್ಲದವನು); ಅ=ಅನಂತಃ(ಸಾವಿಲ್ಲದವನು). ಹಾಗೆ ‘ಆ’. ಆ=ಆದಿಃ(ಎಲ್ಲಕ್ಕಿಂತ ಮೊದಲಿದ್ದವನು); ಆ=ಆನಂದಃ; ಇತ್ಯಾದಿ. ವರಾಹ ಪುರಾಣದಲ್ಲಿ ವೇದವ್ಯಾಸರು ಹೇಳುತ್ತಾರೆ: “ಯಾವಂತಿ ಪಟಿಥಾನಿ ತಾವಂತಿ ಹರಿನಾಮಂತಿ ಪಟಿಥಾನಿ ನಾಸಂಶಯಹ” ಎಂದು. ಋಗ್ವೇದದಲ್ಲಿ 4 ಲಕ್ಷದ 32 ಸಾವಿರ ಅಕ್ಷರಗಳಿವೆ. ಆದ್ದರಿಂದ ಪ್ರಾಚೀನರ ಪ್ರಕಾರ ಒಮ್ಮೆ ಋಗ್ವೇದ ಓದಿದರೆ 4 ಲಕ್ಷದ 32 ಸಾವಿರ ಭಗವಂತನ ನಾಮವನ್ನು ಹೇಳಿದ ಹಾಗಾಗುತ್ತದೆ. ಒಟ್ಟಿನಲ್ಲಿ ವೇದದ ಅಕ್ಷರದಿಂದ ಭಗವಂತನನ್ನು ಕಾಣುವುದು, ಪದದಿಂದ ಭಗವಂತನನ್ನು ಕಾಣುವುದು, ವಾಕ್ಯದಿಂದ ಭಗವಂತನನ್ನು ಕಾಣುವುದು ಮತ್ತು ಪ್ರಕರಣದಲ್ಲಿ ಭಗವಂತನನ್ನು ಕಾಣುವುದು. ಹೀಗೆ ವೇದವನ್ನು ಬಿಡಿಸಿ ನೋಡಿದಾಗ ಮಾತ್ರ ನಮಗೆ ಅಲ್ಲಿರುವ ಸಂದೇಶ ತಿಳಿಯುತ್ತದೆ. ಇಲ್ಲದಿದ್ದರೆ ಎಲ್ಲವೂ ಲೌಕಿಕವಾಗಿ ಕಾಣುತ್ತದೆ. ಆದರೆ ಎಲ್ಲವನ್ನು ನಾವು ತಿಳಿಯಲು ಸಾಧ್ಯವಿಲ್ಲ(ನಾನ್ಯೋ ಮದ್ವೇದ ಕಶ್ಚನ). ಅದನ್ನು ಪೂರ್ಣವಾಗಿ ತಿಳಿದವನು ಆ ಭಗವಂತನೊಬ್ಬನೆ.
