ಶ್ಲೋಕ – 27
ನೈತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ ।
ತಸ್ಮಾತ್ ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ॥೨೭॥
ನ ಏತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ ।
ತಸ್ಮಾತ್ ಸರ್ವೇಷು ಕಾಲೇಷು ಯೋಗಯುಕ್ತಃ ಭವ ಅರ್ಜುನ- ಪಾರ್ಥ, ಈ ದಾರಿಗಳನ್ನರಿತ ಯಾವ ಸಾಧಕನೂ ದಾರಿ ತಪ್ಪುವುದಿಲ್ಲ. ಅದರಿಂದ, ಓ ಅರ್ಜುನ, ಎಲ್ಲ ಕಾಲಗಳಲ್ಲು ಉಪಾಯವನ್ನರಿತು ನಡೆ.
ಈ ಎರಡೂ ದಾರಿಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದು, ನೀನು ಹೋಗಬೇಕಾದ ದಾರಿ ಯಾವುದು ಎಂದು ತಿಳಿದು, ಆಯಾ ಅಭಿಮಾನಿ ದೇವತೆಗಳ ಜೊತೆಗೆ ಮುಂದಕ್ಕೆ ಸಾಗಬೇಕು. ಆಯಾ ಅಭಿಮಾನಿ ದೇವತೆಗಳು ಬೇರೆಬೇರೆ ಮೆಟ್ಟಲಿನಲ್ಲಿ ಬಂದು ಜೀವನನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಕಾರಣದಿಂದ ಅಂತ್ಯ ಕಾಲದ ಸ್ಮರಣೆಯಲ್ಲಿ ಮಾರ್ಗ ಮತ್ತು ಅಭಿಮಾನಿ ದೇವತೆಗಳ ಚಿಂತನೆ ಅತ್ಯಗತ್ಯ. ಇದನ್ನು ತಿಳಿದು ಅನುಸಂಧಾನ ಮಾಡಿಕೊಂಡು ಅನುಷ್ಠಾನ ಮಾಡಿದರೆ ಯಾವ ಸಾಧಕನಿಗೂ ಗೊಂದಲವಿಲ್ಲ. ಆದ್ದರಿಂದ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ – “ಎಲ್ಲ ಕಾಲದಲ್ಲೂ ಈ ಉಪಾಯವನ್ನರಿತು ನಡೆ” ಎಂದು.
